ಶ್ರೀ ತತ್ವವಾದ ಮತವ

ಶ್ರೀ ತತ್ವವಾದ ಮತವ

(ರಾಗ ಭೂಪಾಳಿ ಝಂಪೆ ತಾಳ) ಶ್ರೀ ತತ್ವವಾದ ಮತವ ಶ್ರೀ ತತ್ವವಾದ ಮತವಾರ್ಧಿ ಶುಭ ಚಂದ್ರಮನ ಭೂತಳದೊಳಪ್ರತಿಮವೆನಿಪ ಶ್ರೀಯತಿವರನ ಪ್ರೀತಿಯಿಂ ಭಜಿಸೆ ಇಷ್ಟಾರ್ಥವನು ಸಲ್ಲಿಸುವ ವಾತದೇವನ ಸ್ಮರಿಸಿರೈ , ಅಯ್ಯ ಶ್ರೀ ಮಾರುತನು ತ್ರೇತೆಯಲಿ ಹನುಮನೆಂದಿಸಿ ತಾ ಮುದದಿ ಅಂಜನಾದೇವಿ ಗರ್ಭದಿ ಜನಿಸಿ ರಾಮ ಪದಾಂಭುಜವ ಭಜಿಸಿ ಸದ್ಭಕ್ತಿಯಲಿ ಸ್ವಾಮಿಕಾರ್ಯವನೆ ಕೊಂಡು ನೇಮದಿಂ ಸಾಗರವ ದಾಟಿ ಲಂಕೆಯ ಪೊಕ್ಕು ಪ್ರೇಮದಿಂದೊಯ್ದ ಮುದ್ರಿಕೆಯ ಜಾನಕಿಗಿತ್ತ ಆ ಮಹದ್ವನವ ದನುಜರನೆಲ್ಲ ಮರ್ದಿಸಿದ ಧೀಮಂತನಂ ಭಜಿಸಿರೈ , ಅಯ್ಯ ದ್ವಾಪರದ್ಯಾಇ ಮಾರುತನು ಕುಂತಿದಾರಕನೆನಿಸಿ ದ್ವಾಪರನ ಯುಕ್ತಿಯಿಂದುತ್ಕೃಷ್ಟವಾಗಿದ್ದ ಪಾಪಿಗಳನಳಿದು ಕೀಚಕ ಜರಾಸಂಧಾದಿ ಭೂಪಾಲಕರನು ತರಿದು ದ್ರೌಪದಿಗೆ ಸೌಗಂಧಿಕುಸುಮವನು ತರಪೋಗ- ಲಾ ಪಥದೊಳಸುರ ಮಣಿಮಂತ ಕದನವ ಮಾಡೆ ಕೋಪದಿಂದವನ ಮರ್ದಿಸಿದನತಿ ಬಲವಂತನಾ ಪುರುಷನಮ್ ಭಜಿಸಿರೈ , ಅಯ್ಯ ಕಲಿಯುಗವು ಪ್ರಾಪ್ತವಾಗಲು ಮಧ್ವನಾಮದಿಂ- ದಿಳೆಯೊಳವತರಿಸಿ ಸೋಹಂ ಎಂಬ ಶಂಕರನ ಹುಲುಮತವ ಮುರಿದು ಮೋಹಕಶಾಸ್ತ್ರವಳಿದು ಮಾಯ್ಗಳ ಎಲ್ಲ ಹಲ್ಲು ಮುರಿದು ಪ್ರಳಯ ಭೈರವನೆಂಬ ಬಿರುದು ಅವನಿಯ ಮೇಲೆ ನೆಲೆಗೊಳಿಸಿ ವಿಷ್ಣು ಪರದೈವವೆಂದು ಸುಜನರಿಗೆ ತಿಳಿಸಿ ಮೂವತ್ತೇಳು ಗ್ರಂಥಗಳ ಸ್ಥಾಪಿಸಿದ ಅಲವ ಬೋಧರ ಭಜಿಸಿರೈ , ಅಯ್ಯ ಪ್ರತಿವಾದಿಯೆದುರಾಗಿ ತಲೆಯತ್ತದಂತೆ ಸಂ- ತತ ಧರೆಯೊಳದ್ವೈತವ ಅಂಕುರಿಸದಂತೆ ಕು- ತ್ಸಿತವಾದ ಶಾಸ್ತ್ರಗಳು ಪಲ್ಲವಿಸದಂತೆ ಮಾಯ್ಗಳ ಮತವು ಪೆಚ್ಚದಂತೆ ಕ್ಷಿತಿಯೊಳಗೆ ಶ್ರೀತತ್ವವಾದ ನೆಲಸಿಪ್ಪಂತೆ ಶ್ರುತಿ ಶಾಸ್ತ್ರ ಉಪನಿಷದ್ಗಳು ಸಮ್ಮತಿಪ್ಪಂತೆ ಮತವ ಸ್ಥಾಪಿಸಿ ಬದರೀ ಕ್ಷೇತ್ರದಲ್ಲಿ ನೆಲಸಿಪ್ಪ ಯತಿಶ್ರೇಷ್ಠರಂ ಭಜಿಸಿರೈ, ಅಯ್ಯ ಪರಮ ವೈಷ್ಣವರತ್ನಗಳನು ಮಿಂಚಿಪ ರತ್ನದ ಸಾಣೆ ಪರವಾದಿಗಳ ಗರ್ವ ಮುರಿವ ವಜ್ರದ ಢಾಣೆ ಗುರು ಮಧ್ವ ಮುನಿವರರ ಪರಮಸಾಮರ್ಥ್ಯಕ್ಕೆ ಎಣೆಗಾಣೆ ಲೋಕದೊಳಗೆ ಹರಮುಖ್ಯರಿಗೆ ತತ್ವವನು ಬೋಧಿಸುವ ವಾಣೆ ಚರಿಸದಂತದ್ವೈತರಿಗೆ ಇಟ್ಟಿಹುದು ಆಣೆ ಉರುಪರಾಕ್ರಮ ಶ್ವಾಸಪತಿ ವಿಷ್ಣುವಿಜ್ಞಾನ ಮರುತದೇವನ ಭಜಿಸಿರೈ , ಅಯ್ಯ ಅಕಳಂಕ ಗುರು ಮುಮುಕ್ಷುಗಳ ಮಸ್ತಕದ ಮಣಿ ನಿಖಿಲ ಸುಪುರಾಣ ಶ್ರುತಿ ಶಾಸ್ತ್ರಾಗಮಗಳ ಖಣಿ ಅಖಿಳವಾದಿಗಳ ಜಿಹ್ವೆಯಲಿ ಮೆಟ್ಟಿದ ಎಣಿ ಭಕುತಜನಚಿಂತಾಮಣಿ ಯುಕುತಿ ಪರಿಪೂರ್ಣ ಯತ್ಯಾಶ್ರಮಕೆ ಕಟ್ಟಾಣಿ ಪ್ರಕಟಕವಿಜನಕಮಲವ್ಯೂಹಕೆ ಗಗನಮಣಿ ಸಕಲಮುನಿಜನವಂದ್ಯ ಚೈತನ್ಯ ಸುತ್ರಾಣಿ ಸುಖತೀರ್ಥರಂ ಭಜಿಸಿರೈ , ಅಯ್ಯ ಮುಂದೆ ಅಜನಾಗಿ ಪವಮಾನ ಕೃತಯುಗದಲ್ಲಿ ಬಮ್ದು ಸ್ವೇಚ್ಛೆಯಲಿ ಸೃಜಿಸುವನು ಸಚರಾಚರವ ಸಂದೇಹವಿಲ್ಲ ತಪ್ಪದು ವೇದವಾಕ್ಯವಿದು ಹಿಂದೆ ಶ್ರೀಹರಿ ಸೇವೆಯ ಒಂದು ವಿಷಯಾಪೇಕ್ಷಿಸದಲೆ ನಿಶ್ಚಲ ಭಕುತಿ- ಯಿಂದೆ ಮಾಡಿದ ಪುಣ್ಯಫಲದಿಂದ ಬ್ರಹ್ಮತ್ವ ಬಂದಿಹುದು ಈಗ ಯುಗಯುಗದೊಳವತರಿಸುವಾನಂದಮುನಿಪರ ಭಜಿಸಿರೈ , ಅಯ್ಯ ಹರಿಗೆ ಸರಿ ಮಿಗಿಲೆನಿಪರಿಲ್ಲ ದೈವಂಗಳೊಳು ಗುರು ಮಧ್ವ ರಾಯರಿಗೆ ಸರಿಯಿಲ್ಲ ಗುರುಗಳೊಳು ಪರಮ ವೈಷ್ಣವರಿಗೆಣೆಯಿಲ್ಲ ಲೋಕದೊಳೆಂದು ಪಿರಿದು ಡಂಗುರವ ಹೊಯ್ಸಿ ಬಿರಿದು ಉಚ್ಚರಿಸಿ ಸದ್ಭಕ್ತಿಯಿಂದಲಿ ತನ್ನ ಮರೆಹೊಕ್ಕ ಜನರ ಫಣೆ ದುರ್ಲೇಖನವ ತೊಡೆದು ಬರೆದು ವೈಷ್ಣವಲಿಪಿಯ ಶುದ್ಧಾತ್ಮರನು ಮಾಳ್ಪ ಪರಮ ಗುರುಗಳ ಭಜಿಸಿರೈ ಭುವನತ್ರಯದಲ್ಲಿದ್ದ ಜನರ ಪಾವನರಮಾಳ್ಪ ಪವಮಾನದೇವರ ಮಹಾತ್ಮೆಯಂ ವರ್ಣಿಸಿದ ನವರತ್ನ ಮಾಲೆ ಕಂಠದಲಿ ಸಂತತ ಧರಿಸಿದವರಿಗೆ ಸುಸೌಖ್ಯವನು ತವಕದಿಂದಿತ್ತು ಇಹಲೋಕದಲಿ ತರುವಾಯ ಜವನ ಭಾದೆಯ ಬಿಡಿಸಿ ಮುಕುತಿಪಥದಲ್ಲಿಡುವ ಪವನನಂತರ್ಯಾಮಿ ಪುರಂದರವಿಠಲನನು ಜವದಿಂದ ಭಜಿಸಿರಯ್ಯ , ಅಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು