ಶ್ರೀಮಧ್ವ ರಮಣ ನಿನ್ನ ದ್ವೈತಮಹಿಮೆ
( ರಾಗ ಸೌರಾಷ್ಟ್ರ ಏಕತಾಳ)
ಶ್ರೀಮಧ್ವ ರಮಣ ನಿನ್ನ ದ್ವೈತಮಹಿಮೆ ಎಂಥಾದ್ದೋ
ಸಮಸ್ತ ಕೋಟಿ ವೇದಂಗಳು ಕೂಡಿ ತುತಿಸಲೊಮ್ಮೆ
ಸಮರ್ಥಂಗಳಾಗಲಿಲ್ಲವೋ ||ಪ||
ಯಂ ಕಾಮಯೇ ತಂತಮುಗ್ರಂ ಕೃಣೋಮಿ ಎಂಬಂಥಾ
ಶ್ರುತಿ ನಿಕರ ಪ್ರತಿಪಾದ್ಯಳಾದಳೋ ಸುಖಾಬ್ದಿಯಲ್ಲಿ
ನಿರತ ಮುಳುಗಿಪ್ಪಳೋ ರಮೆ ||
ನಖದಲ್ಲಿ ನಾನಾ ವಿಧಾನೇಕ ವಿಷಯಂಗಳನ್ನು
ಏಕ ಮನದಿಂದ ನೋಡುತ ಲಯಾಬ್ಧಿಯಲ್ಲಿ
ನಗುತ ಕುಳಿದಿಪ್ಪಳೋ ರಮೆ ||
ಒಂದೇ ಕಾಲದಲ್ಲಿ ನಿನ್ನ ಒಂದೇ ರೋಮಕೂಪದಲ್ಲಿ
ಅನಂತಕೋಟಿ ಬ್ರಹ್ಮಾಂಡಗಳು ಮಾಧವನೊಬ್ಬ
ಆನಂದದಿಂದ ಧರಿಸಿಪ್ಪ ||
ಅವನಾಗ ಅವತಾರ ಅನಂತಾನಂತ ರೂಪಂಗಳು
ದೇವಕೀತನಯಗುಂಟಯ್ಯ ಕ್ಷೀರಾಬ್ಧಿಯಲ್ಲಿ
ದೇವೇಶ ಸ್ತ್ರೀರೂಪ ಧರಿಸಿಪ್ಪ ||
ಐವತ್ತು ಕೋಟಿ ಯೋಜನ ವಿಸ್ತೀರ್ಣ ವಟಪತ್ರದಲ್ಲಿ
ಏಳು ಕೋಟಿಯೋಜನ ಮಾನದಿ ಬಾಲಕನೊಬ್ಬ
ಬಾಯಿಲುಂಗುಟನಿಕ್ಕಿ ಮಲಗಿರುವ ||
ಅಣೋರಣೀಯಾನ್ ಮಹತೋ ಮಹೀಯಾನೆಂಬೋ ನಾನಾ ಶ್ರುತಿಯಿಂದ
ಸನ್ನುತ ಸದ್ಗುಣ ಸಂಪೂರ್ಣನೂ ವನಜಾಕ್ಷ
ನಿನ್ನ ಸಿರಿ ನಿನ್ನ ಮಹಿಮೆ ಅರಿಯಳೋ ||
ಅನಾಥರಕ್ಷಕನೆಂದು ನಿನ್ನ ನಂಬಿದಂಥ ಎನ್ನ ಮನ್ನಿಸಿ
ರಕ್ಷಿಸೋ ಶ್ರೀಶ ಲಕ್ಷ್ಮೀಶ ಅನಾಥಬಂಧೋ
ದೀನಬಂಧೋ ದಯಾನಿಧಿಯೇ ||
ದಶಶತಸಾಸಿರದ ರೂಪನಾದ ವಾಸುದೇವ ಕುಸುಮನಾಭ
ಶೇಷಾದ್ರೀಶನ ಪುರಂದರವಿಠಲ ನಿನ್ನ
ದಾಸನೆಂದು ದಯ ಮಾಡಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments