ಶಿವ ನೀನ್ಹ್ಯಾಗಾದ್ಯೋ
---ರಾಗ ಮಧ್ಯಮಾವತಿ (ಭೂಪ್ ) ಅಟತಾಳ (ದೀಪಚಂದಿ)
ಶಿವ ನೀನ್ಹ್ಯಾಗಾದ್ಯೋ ನರಪಶು ಶಿವ ನೀನ್ಹ್ಯಾಗಾದ್ಯೋ
ಶಿವ ನೀನಾದರೆ ಶಿವನರಾಣಿ ನಿನಗ್ಯುವತಿ ಆದಳಲ್ಲೊ ಅವಿವೇಕಿ ಮನುಜಾ ||ಪ||
ಗರಗೊರಳೊಲಿ ಧರಿಸಿದ ಮಹದೇವನ
ಸರಿಯಾಗುವಿಯಂತೊದರುತಿಹುವಿ
ಪರಮಾನ್ನದಿ ಮಕ್ಷಿಕ ಬೀಳಲು ಉಂಡು
ಕರಗಿಸಿಕೊಳ್ಳದೆ ಅಳುವ ಮುಗ್ಗಲುಗೇಡಿ ||೧||
ಕುಂಡಲಿಭೂಷಣ ಚಂಡವಿಕ್ರಮ ಕ-
ಮಂಡಲುಧರನು ನಾನೆಂಬೀ
ಕಂಡರೆ ಸರ್ಪನ ಕಳವಳಗೊಳುತೀ
ಹೆಂಡಗಾರ ಹೆಣ ಮುಂಡೇಗಂಡ ||೨||
ನಂದಿವಾಹನ ಪುರಂದರಾದಿ ಸುರ-
ವಂದ್ಯಹರನೇ ನಾನೆಂತೆಂಬೀ
ಮಂದಮತಿಯೆ ಒಂದಿನ ಎತ್ತೇರಲು
ಮಂದಿಯೊಳಗೆ ನೀ ನಿಂದಿತನಾಗುವಿ ||೩||
ಪೀತಾಂಬರ ನಿರ್ಭೀತ ಭೂತಗಣ-
ನಾಥನೆ ನಾನೆಯೆಂತೆಂಬೀ
ಧೋತರ ಬಿಟ್ಟರೆ ಪಾದರಕ್ಷೆಯಲಿ
ಘಾತಿಸುವರು ನಿನ್ನ ಭೂತ ಸೋಕಿತೆಂದು ||೪||
ಅಸ್ಥಿಕಂಧರಾ ಅಸ್ಥಿಚರ್ಮಧರ ಸ-
ಸಮಸ್ತ ಜಗದ್ಗುರು ನಾನೆಂಬೀ
ಹಸ್ತದಿಂದ ಒಂದಸ್ಥಿ ಪಿಡಿದರೆ
ಸ್ವಸ್ಥಳದಿಂದ ನಿರಸ್ತನ ಮಾಳ್ಪರು ||೫||
ಮೃತ್ಯುಂಜಯ ಮುಪ್ಪುರಹರ
ಮತ್ತೊಬ್ಬರು ದಾರಿಲ್ಲೆಂತೆಂಬೀ
ಕತ್ತೆಯಂತೆ ನೀ ಒದರಿದರಾಯಿತೇ
ಸತ್ತರೆ ಹೊತ್ತೊಯ್ದಿಡುವರು ಕಡೆಗೇ ||೬||
ಮುತ್ತೊಂಭತ್ತು ವಿಧಾತನಬ್ದ ಜಗ-
ನ್ನಾಥವಿಠಲನ ಪೂಜಿಸಿದ
ಆತನೆ ನಾನೆಂಬ ಮಾತು ಲೋಕದೊಳು
ಕೌತುಕವಾಗದೆ ಪಾತಕಿ ನರನೆ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments