ಶಿವ ನೀನ್ಹೇಗಾದ್ಯೋ
(ರಾಗ ನಾದನಾಮಕ್ರಿಯಾ ಆದಿ ತಾಳ)
ಶಿವ ನೀನ್ಹೇಗಾದ್ಯೋ, ತಾಯಿಗಂಡ
ಹರ ನೀ ಹೇಗಾದ್ಯೋ ||ಪ||
ಶಿವ ನೀನಾದರೆ ಶಿವನರ್ಧಾಂಗಿಗೆ
ಧವನಾಗ ಬೇಕಲ್ಲೋ ಅವಿವೇಕಿ ಮೂಢ ||ಅ.ಪ||
ಗಂಗೆಯ ಶಿರದಲ್ಲಿ ಧರಿಸಿದ ನಮ್ಮ ಶಿವ
ಕುಂಭವ ಹೊರದೆ ಬಡಕೊಂಬೆ ಖೋಡಿ
ಮಂಟೆಯಲಿ ಮನೆ ಮಾಡಿದ ನಮ್ಮ ಶಿವ
ಉಂಡಾದ ಮಕ್ಕಳಿಗಳವಲ್ಲೋ ಖೋಡಿ
ಕಾಲಕೂಟ ವಿಷ ಧರಿಸಿದ ನಮ್ಮ ಶಿವ
ಚೇಳು ಕಡಿದರೆ ಹೊಡಕೊಂಬೆ ಖೋಡಿ
ಕೆಂಡಗಣ್ಣ ನೊಸಲೊಳಗಿಟ್ಟ ನಮ್ಮ ಶಿವ
ಕೆಂಡವ ಸೋಕಲು ಅಳುವ್ಯಲ್ಲೋ ಖೋಡಿ
ಕರುಣಾಸಾಗರ ಶ್ರೀ ಪುರಂದರವಿಠಲನ್ನ
ಚರಣವ ಸ್ಮರಿಸುತ ನೀ ಬಾಳೋ ಖೋಡಿ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments