ವ್ಯರ್ಥವಾಯಿತೆ ಜನುಮ
( ರಾಗ ಕಾಮವರ್ಧನಿ ರೂಪಕತಾಳ)
ವ್ಯರ್ಥವಾಯಿತೆ ಜನುಮ ವ್ಯರ್ಥವಾಯಿತೆ ||ಪ||
ಅತ್ತಲಿಲ್ಲ ಇತ್ತಲಿಲ್ಲ ಅರ್ಥಮಾನ ಹಾನಿಯಾಗಿ ||ಅ||
ಕುರುಡನರಿವೆಯನ್ನು ಹೊಸೆಯೆ ಕರುವು ಮೆದ್ದ ತೆರದಂತೆ
ಪರರ ಕಾಡಿ ತಂದ ಧನವು ಪುತ್ರ ಮಿತ್ರರಿಗಿತ್ತು ||
ತರುಣಿಯರಿಗೆ ಹಿತವಿಲ್ಲ ತರಳರಿಗೆ ಮರುಕವಿಲ್ಲ
ಬರೆದು ಬರೆದು ಒರಲಿ ಒರಲಿ ಅರಸುವರಿಯದ ಬಿಟ್ಟಿಮಾಡಿ ||
ಊರು ಊರು ತಿರುಗಿ ತಿರುಗಿ ದಾರಿಯನ್ನು ನಡೆದು ನಡೆದು
ಶರೀರವು ಸೊರಗಿ ಕರಗಿ ಘೋರ ನರಕ ಸಾಧನೆ ಮಾಡಿ ||
ನಾರಿ ಮಗು ಮುದ್ದಾಡಿದರೆ ಜಾರೆ ನೋಡಿ ನಗುವಂತೆ
ಘೋರ ಸಂಸಾರ ನೆಚ್ಚಿ ನೀರು ಕಡೆದು ನೋಡಿದಂತೆ ||
ನರಜನ್ಮದಲ್ಲಿ ಬಂದು ಧರೆಯ ಮೇಲೆ ಪುಟ್ಟಿ ಬೆಳೆದು
ವರದ ಪುರಂದರವಿಠಲನ ಸ್ಮರಣೆಯನ್ನು ಮಾಡದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments