ವಿಧಿನಿಷೇಧ ನಿನ್ನವರಿಗೆಂತೋ ಹರಿಯೆ

ವಿಧಿನಿಷೇಧ ನಿನ್ನವರಿಗೆಂತೋ ಹರಿಯೆ

( ರಾಗ ಮುಖಾರಿ ಆದಿತಾಳ) ವಿಧಿನಿಷೇಧ ನಿನ್ನವರಿಗೆಂತೋ ಹರಿಯೆ || ವಿಧಿ ನಿನ್ನ ಸ್ಮರಣೆ ನಿಷೇಧ ವಿಸ್ಮೃತಿಯೆಂಬ ವಿಧಿಯನೊಂದನು ಬಲ್ಲವಗಲ್ಲದೆ ||ಪ|| ಮಿಂದದ್ದೆ ಗಂಗಾದಿ ಪುಣ್ಯ ತೀರ್ಥಂಗಳು ಬಂದದ್ದೆ ಪುಣ್ಯಕಾಲ ಸಾಧುಜನರು ನಿಂದದ್ದೆ ಗಯಾ ವಾರಾಣಸಿ ಕುರುಕ್ಷೇತ್ರ ಸಂದೇಹವಿಲ್ಲ ಮದ್ದಾನೆ ಪೋದುದೆ ಬೀದಿ || ನಡೆದದ್ದೆಲ್ಲವು ಲಕ್ಷ ಪ್ರದಕ್ಷಿಣೆ ನುಡಿದದ್ದೆಲ್ಲ ಗಾಯತ್ರಿಮಂತ್ರಗಳು ಕುಡಿವೋದೆಲ್ಲವು ಯಜ್ಞ್ಯಾದಿ ಹೋಮದ್ರವ್ಯ ದೃಢಭಕ್ತರೇನು ಮಾಡಿದರದೆ ಮರಿಯಾದೆ || ಕಂಡದ್ದೆ ವಿಶ್ವಾದಿ ಮೂರ್ತಿಗಳು ಭೂ- ಮಂಡಲದಿ ಶಯನವೇ ನಮಸ್ಕಾರ ತಂಡತಂಡ ಕ್ರಿಯೆಗಳು ಹರಿಪೂಜೆ ತೊಂಡರಾಗಿ ಬಿದ್ದಿಹ ಭಾಗವತರಿಗೆ || ಕೆಟ್ಟು ಹೋಗುವದು ಸಂಚಿತಾಗಾಮಿ ಸುಟ್ಟು ಹೋಗುವುದು ಪಾಪಕರ್ಮಗಳು ನಷ್ಟವಾದ ಪ್ರಾರಬ್ದ ಮೀರಿದ ಸೇವೆ ಮೆಟ್ಟಿದ ಪಟ್ಟಣವೆಂಬೋ ಓಲಾಯಿತು || ಎಲ್ಲಿ ನೋಡಿದರಲ್ಲಿ ಪ್ರಾಯೋಪವೇಶ ಮ- ತ್ತೆಲ್ಲಿ ನೋಡಿದರಲ್ಲಿ ಸಮಾಧಿ ಎಲ್ಲೆಲ್ಲು ಪುರಂದರವಿಠಲನ ನಾಮವು ಬಲ್ಲವಗಲ್ಲದೆ ಪಾಪಪುಣ್ಯಾದಲ್ಲೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು