ವಿಧಾತೃ ದೇವತೆಗಳೆಲ್ಲ
( ರಾಗ ಕಾಂಭೋಜ ಝಂಪೆ ತಾಳ)
ವಿಧಾತೃ ದೇವತೆಗಳೆಲ್ಲ ವಿಷ್ಣುವಿನ ಹಿಂದೆ
ಇದಕೆ ನಾ ಫಣಿ ಫಣ ಕೈಯಾಗೆ ಪಿಡಿವೆ ||ಪ||
ಸಕಲ ತೀರ್ಥಗಳೆಲ್ಲ ಸಾಲಿಗ್ರಾಮದ ಹಿಂದೆ
ಸಕಲ ವೃಕ್ಷಗಳೆಲ್ಲ ಶ್ರೀತುಲಸಿ ಹಿಂದೆ
ಪ್ರಕಟ ಗ್ರಂಥಗಳು ಭಾಗವತದ್ಹಿಂದೆ
ಲೋಕದೊಳಿಹ ಜಲವೆಲ್ಲ ಭಾಗೀರಥಿಯ ಹಿಂದೆ
(/ಪ್ರಕಟ ಚೈತನ್ಯಗಳು ಲೋಹದ ಹಿಂದೆ )||
ಮತಗಳೆಲ್ಲವು ಮಧ್ವಮತ ಸುಸಾರದ ಹಿಂದೆ
ಇತರ ವರ್ಣಗಳೆಲ್ಲ ವಿಪ್ರರಾ ಹಿಂದೆ
ವ್ರತಗಳೆಲ್ಲವು ಏಕಾದಶಿಯ(/ಹರಿದಿನ) ವ್ರತದ ಹಿಂದೆ
ಅತಿಶಯದ ದಾನಗಳು ಅನ್ನದಾನದ್ಹಿಂದೆ ||
ಉತ್ತಮ ಗುಣಗಳೆಲ್ಲ ಉದಾರಗುಣದ ಹಿಂದೆ
ಮತ್ತೆ ಕರ್ಮಗಳೆಲ್ಲ ಮಜ್ಜನದ ಹಿಂದೆ
ಇತ್ತ ದ್ರವ್ಯಗಳೆಲ್ಲ ವಿದ್ಯಾದ್ರವ್ಯದ ಹಿಂದೆ
ಚಿತ್ತಜನಯ್ಯ ಶ್ರೀಪುರಂದರವಿಠಲ
(/ ಕ್ಷಿತಿಯೊಳು ನಮ್ಮ ಪುರಂದರವಿಠಲನ
ಭಕ್ತ ವತ್ಸಲನೆಂಬ ಮೆರೆವ ಬಿರುದಿನ ಹಿಂದೆ || )
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments