ವಾಸುದೇವನಾಶ್ರಯಿಸದ ...
ಬೇಹಾಗ್ - ಆದಿತಾಳ
ವಾಸುದೇವನಾಶ್ರಯಿಸದ ಉಪಾಸನ್ಯಾತಕೆ|
ಧ್ಯಾಸ ಬಲಿಯದಿಹ ಮಿಗಿಲಭ್ಯಾಸವ್ಯಾತಕೆ|| |ಪ|
ಹೃದಯ ಶುದ್ಧವಾಗದೆ ಉದಯ ಸ್ನಾನವ್ಯಾತಕೆ
ಬದಿಯಲಿಹ ಸುವಸ್ತುಕಾಣದ ಜ್ಞಾನವ್ಯಾತಕೆ
ಉದರಕುದಿಯು ಶಾಂತಿ ಹೊಂದದ ಸಾಧನವ್ಯಾತಕೆ
ಬುಧರ ಸೇವೆಗೊದಗದಲಿಹ ಸ್ವಧನವ್ಯಾತಕೆ
ಭಾವನೆಲೆಯಗೊಳ್ಳದಲಿಹ ಭಕ್ತಿ ಯಾತಕೆ
ಕಾವನಯ್ಯನ ಕಾಣದಲಿಹ ಮುಕುತಿ ಯಾತಕೆ
ದೇವದೇವನ ಸೇವೆಗಲ್ಲದ ಶಕುತಿ ಯಾತಕೆ
ಹೇವಹೆಮ್ಮೆಯಳಿಯದಲಿಹ ವಿರಕುತಿ ಯಾತಕೆ
ತತ್ವದ ನೆಲೆ ತಿಳಿಯದಿಹ ವಿದ್ವತ್ವವೇತಕೆ
ಸತ್ವಗುಣ ವಿಚಾರವಿಲ್ಲದಿಹ ಕವಿತ್ವವೇತಕೆ
ಚಿತ್ತ ಶುದ್ಧವಾಗದಿಹ ಮಹತ್ವವೇತಕೆ
ವಿತ್ತದಾಶೆ ತೊರೆಯದ ಸಿದ್ಧಿಯೇತಕೆ
ನೀತಿಮಾರ್ಗವರಿಯದವನ ರೀತಿಯೇತಕೆ
ಮಾತಿನ ಮಿತಿಯಿಲ್ಲದವನ ಪ್ರೀತಿಯೇತಕೆ
ರೀತಿ ಆದರವಿಲ್ಲದಮೃತ ಊಟವೇತಕೆ
ಜ್ಯೋತಿ ತನ್ನೊಳರಿಯದ ಯತಿತ್ವವೇತಕೆ
ಮನವು ಸ್ಥಿರಗೊಳ್ಳದವನ ಶ್ರವಣವೇತಕೆ
ನೆನೆವು ನೆಲೆಗೊಳ್ಳದಿದ್ದರೆ ಮನನವೇತಕೆ
ತನುವಿನಲ್ಲಿ ಘನವ ಕಾಣದ ಅನುಭವ್ಯಾತಕೆ
ದಾನಿ ಮಹೀಪತಿಸ್ವಾಮಿಯ ಕಾಣದ ಜನ್ಮವೇತಕೆ
(ಮಹೀಪತಿ ದಾಸರ ಈ ರಚನೆ ಬೇಲೂರು ಕೇಶವದಾಸರ ಕರ್ನಾಟಕ ಭಕ್ತ ವಿಜಯದಲ್ಲಿದೆ)
ದಾಸ ಸಾಹಿತ್ಯ ಪ್ರಕಾರ
- Log in to post comments