ಲಂಗೋಟಿ ಬಲುವೊಳ್ಳೆದಣ್ಣ

ಲಂಗೋಟಿ ಬಲುವೊಳ್ಳೆದಣ್ಣ

(ರಾಗ ನಾದನಾಮಕ್ರಿಯ ಅಟತಾಳ ) ಲಂಗೋಟಿ ಬಲುವೊಳ್ಳೆದಣ್ಣ, ಒಬ್ಬರ್- ಹಂಗಿಲ್ಲದೆ ಮಡಿಗೆ ಒದಗುವುದಣ್ಣ ||ಪ|| ಬಡವರಿಗಾಧಾರವಣ್ಣ, ಈ ಲಂಗೋಟಿ ಬೈರಾಗಿಗಳ ಭಾಗ್ಯವಣ್ಣ ಕಡುಕಳ್ಳರಿಗೆ ಗಂಡ, ಮಡಿಧೋತ್ರಗಳ ಮಿಂಡ ನಡುಗುವ ಸಮಯಕ್ಕೆ ಮಡಿಗೆ ಒದಗುವಂಥ || ಜಿತಮನ ಸನ್ಯಾಸಿಗಳಿಗಿದೆ ಕೌಪೀನ ವ್ರತವುಳ್ಳ ಬ್ರಹ್ಮಚಾರಿಗೆ ಮುಖ್ಯವು ಅತಿಶಯವಿದೆ ಆಂಜನೇಯ ನಾರದರಿಗೆ ಗತಿಯಿಲ್ಲದವರಿಗೆ ಮಿತವಾಗಿ ಇರುವಂಥ || ದುಡ್ಡು ಮುಟ್ಟದಂತೆ ದೊರಕುವ ವಸ್ತುವು ದೊಡ್ಡ ಅರಣ್ಯದಿ ಭಯವಿಲ್ಲವು ಹೆಡ್ಡರೆಂಬುವರೇನೊ ಲಂಗೋಟಿ ಜನರನ್ನು ದೊಡ್ಡವರೆಂದು ವಂದಿಸುವರು ಯತಿಗಳ || ಮೋಕ್ಷ ಮಾರ್ಗಕೆ ಕಲ್ಪವೃಕ್ಷವೀ ಲಂಗೋಟಿ ಭಿಕ್ಷಗಾರರಿಗೆಲ್ಲ ಅನುಕೂಲವು ತತ್‍ಕ್ಷಣದೊಳಗೆ ಕಾರ್ಯಗಳ ತೂಗಿಸಿ ಮಾನ- ರಕ್ಷಣೆಗೆ ಬಹು ರಮ್ಯವಾಗಿರುವಂಥ || ಮಡಿವಾಳರಿಗೆ ಶತ್ರು, ಮಠದಯ್ಯಗಳ ಮಿತ್ರ ಪೊಡವಿಯೊಳ್ ಯಾಚಕರಿಗೆ ನೆರವು ದೃಢಭಕ್ತ ಬಲಿಚಕ್ರವರ್ತಿಗೋಸ್ಕರ ನಮ್ಮ ಒಡೆಯ ಶ್ರೀ ಪುರಂದರವಿಠಲ ದರಿಸಿದಂಥ ||
ದಾಸ ಸಾಹಿತ್ಯ ಪ್ರಕಾರ
ಬರೆದವರು