ರಾಮಕೃಷ್ಣರು ಮನೆಗೆ ಬಂದರು
( ರಾಗ ಜಂಜೂಟಿ ಆದಿ ತಾಳ)
ರಾಮಕೃಷ್ಣರು ಮನೆಗೆ ಬಂದರು ಬಾಗಿಲ ತೆರೆಯಿರೆ ||ಪ ||
ಕಾಮಧೇನು ಬಂದಂತಾಯಿತು ವರವ ಬೇಡಿರೆ ||ಅ ||
ಚೆಂಡು ಬುಗರಿ ಚಿಣ್ಣಿಕೋಲು ಗಜ್ಜಗವಾಡುತ
ದುಂಡು ಮಲ್ಲಿಗೆ ಮುಡಿದು ಕೊಳಲನೂದಿ ಪಾಡುತ
ಹಿಂಡು ಪೆಣ್ಗಳ ಮುದ್ದು ಮುಖದ ಸೊಬಗ ನೋಡುತ
ಭಂಡು ಮಾಡಿ ಬಾಲೆಯರೊಡನೆ ಸರಸವಾಡುತ ||
ಮಕರಕುಂಡಲ ನೀಲಮುತ್ತಿನ ಬಾವುಲಿಡುತಲಿ
ಕಂಕಣ ಹಾರ ತೋಳಬಂದಿ ತೊಡುಗೆ ತೊಡುತಲಿ
ಸುಕುಮಾರ ಸುಂದರವಾದ ಉಡುಗೆಯುಡುತಲಿ
ಮುಖದ ಕಮಲ ಮುಗುಳುನಗೆಯ ಸುಖವ ಕೊಡುತಲಿ ||
ಪೊಕ್ಕುಳಲ್ಲಿ ಅಜನ ಪಡೆದ ದೇವದೇವನು
ಚಿಕ್ಕ ಅಂಗುಷ್ಠದಲ್ಲಿ ಗಂಗೆಯ ಪಡೆದನು
ಮಕ್ಕಳ ಮಾಣಿಕ್ಯ ಗುರು ಪುರಂದರವಿಠಲನು
ಅಕ್ಕರೆಯಿಂದಲಿ ಮುಕುತಿ ಕೊಡುವ ರಂಗನಾಥನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments