ರಾಜಭೋಗಕಿಂತಧಿಕ ಭೋಗವುಂಟೆ
( ರಾಗ ಮಧ್ಯಮಾವತಿ ಝಂಪೆ(/ಅಟ) ತಾಳ)
ರಾಜಭೋಗಕಿಂತಧಿಕ ಭೋಗವುಂಟೆ || ಪ ||
ರಾಜೀವಾಕ್ಷನಿಗಿಂತಧಿಕ ದೈವವುಂಟೆ ||ಅ ||
ಶರೀರ ಧರ್ಮ ಅರಿಯದಗೆ ಜಾಗ್ರವುಂಟೆ
ಗುರುವಿಂದಲಧಿಕ ಮುಕ್ತಿಯನೀವರುಂಟೆ
ಮರಣಕಿಂತಧಿಕ ವೆಗ್ಗಳ ಭಯವುಂಟೆ
ಸಿರಿ ತೊಲಗಿದ ಮೇಲೆ ಸುಖವೆಂಬುದುಂಟೆ ||
ಮೂಢನೆಂಬವಗೆ ಬಲ್ಲವಿಕೆ ತಾನುಂಟೆ
ಹೇಡಿಯಾದವಗೆ ದೈರ್ಯದ ಬಲವುಂಟೆ
ಪಾಡಲರಿಯದವಗೆ ಸ್ವರಭೇದವುಂಟೆ
ಗಾಡಿಗಾತಿಯರಿಗೆ ಪತಿ ಭಕ್ತಿಯುಂಟೆ ||
ನುಡಿಯಬಲ್ಲವಗೆ ಕಲಹವೆಂಬುದುಂಟೆ
ಕೊಡಬಲ್ಲವಗೆ ಲೋಭದ ತೊಡರುಂಟೆ
ಜಡ ಮುಸುಕಿದಗೆ ವಿದ್ಯೆಯ ಬಲವುಂಟೆ
ಒಡೆಯ ಪುರಂದರವಿಠಲಗೆಣೆಯುಂಟೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments