ರಾಗಿ ತಂದೀರ್ಯಾ

ರಾಗಿ ತಂದೀರ್ಯಾ

(ರಾಗ ನಾದನಾಮಕ್ರಿಯ ಛಾಪು ತಾಳ) ರಾಗಿ ತಂದೀರ್ಯಾ ,ಭಿಕ್ಷಕೆ ರಾಗಿ ತಂದೀರ್ಯಾ ||ಪ|| ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ||ಅ.ಪ|| ಅನ್ನದಾನವ ಮಾಡುವರಾಗಿ ಅನ್ನ ಛತ್ರವನಿಟ್ಟವರಾಗಿ ಅನ್ಯ ವಾರ್ತೆಯ ಬಿಟ್ಟವರಾಗಿ ಅನುದಿನ ಭಜನೆಯ ಮಾಡುವರಾಗಿ ಮಾತಾ ಪಿತೃಗಳ ಸೇವಿಪರಾಗಿ ಪಾಪ ಕಾರ್ಯವ ಬಿಟ್ಟವರಾಗಿ ಜಾತಿಯಲ್ಲಿ ಮಿಗಿಲಾದವರಾಗಿ ನೀತಿ ಮಾರ್ಗದಲಿ ಖ್ಯಾತರಾಗಿ ಗುರು ಕಾರುಣ್ಯವ ಪಡೆದವರಾಗಿ ಗುರುವಿನ ಮರ್ಮವ ತಿಳಿದವರಾಗಿ ಗುರುವಿನ ಪಾದವ ಸ್ಮರಿಸುವರಾಗಿ ಪರಮ ಪುಣ್ಯವ ಮಾಡುವರಾಗಿ ಶ್ರೀನಿವಾಸನ ಸ್ಮರಿಸುವರಾಗಿ ಪ್ರಾಣರಾಯರ ದಾಸರಾಗಿ ದಾನಕೆಂದು ಬಲು ಹೆದರಿ ಇಂಥ ದೀನ ವೃತ್ತಿಯಲಿ ಹೀನರಾಗಿ ಪಕ್ಷಮಾಸ ವ್ರತ ಮಾಡುವರಾಗಿ ಪಕ್ಷಿವಾಹನಗೆ ಪ್ರಿಯರಾಗಿ ಕುಕ್ಷಿಯಲಿ ಕಲುಷವಿಲ್ಲದವರಾಗಿ ಭಿಕ್ಷಕರು ಅತಿ ತುಚ್ಛರಾಗಿ ವೇದ ಪುರಾಣವ ತಿಳಿದವರಾಗಿ ಮೇದಿನಿಯಾಳುವಂಥವರಾಗಿ ಸಾಧು ಧರ್ಮಗಳ ಚರಿಸುವರಾಗಿ ಓದಿ ಗ್ರಂಥಗಳ ಪಂಡಿತರಾಗಿ ಆರು ಮಾರ್ಗವ ಅರಿತವರಾಗಿ ಮೂರು ಮಾರ್ಗವ ತಿಳಿದವರಾಗಿ ಭೂರಿ ತತ್ವವ ಬೆರದವರಾಗಿ ಕ್ರೂರರ ಸಂಗವ ಬಿಟ್ಟವರಾಗಿ ಕಾಮ ಕ್ರೋಧವ ಅಳಿದವರಾಗಿ ನೇಮ ನಿತ್ಯವ ಮಾಡುವರಾಗಿ ಆ ಮಹಾ ಪದವಿಯ ಸುಖಿಸುವರಾಗಿ ಪ್ರೇಮದಿ ಕುಣಿ ಕುಣಿದಾಡುವರಾಗಿ ಸಿರಿರಮಣನ ಸದಾ ಸ್ಮರಿಸುವರಾಗಿ ಗುರುತಿಗೆ ಬಾಹೋರಂಥವರಾಗಿ ಕರಕರೆ ಸಂಸಾರವ ನೀಗುವರಾಗಿ ಪುರಂದರವಿಠಲನ ಸೇವಿಪರಾಗಿ
ದಾಸ ಸಾಹಿತ್ಯ ಪ್ರಕಾರ
ಬರೆದವರು