ರಮಣನಿಲ್ಲದ ನಾರಿ
(ರಾಗ ಮುಖಾರಿ ಝಂಪೆ ತಾಳ)
ರಮಣನಿಲ್ಲದ ನಾರಿ ಪರರ ಕಣ್ಣಿಗೆ ಮಾರಿ ||ಪ||
ಹಡೆದವಳ ಎದೆ ಕೊರಳ ಕೊಯ್ವಂಥ ಚೂರಿ ||ಅ.ಪ||
ಮಾತು ಕಲಿತರೆ ಏನು ಮಹ ಜಾಣೆಯಾದರೇನು
ಚಾತುರ್ಯವಿದ್ದರೇನು ಚೆಲುವೆಯಾದರೇನು
ರಾಶಿ ಹಣವಿದ್ದರೇನು ಏಸು ಪೇಳಿದರೇನು
ರೀತಿ ಕೆಟ್ಟ ಜನ್ಮ ಪೊರೆಯ ಬೇಕಲ್ಲ
ಹೊರಗೆ ಬರಲಿಕೆ ಸಲ್ಲ ಇದಿರಾಗಿ ಇರಸಲ್ಲ
ಅಡುಗೆ ಯೋಗ್ಯಳಲ್ಲ ಹರಿಯು ತಾನೆ ಬಲ್ಲ
ಮರಿಯಾದೆಗಳು ಇಲ್ಲ ಬಲು ಹಗುರ ರಾಜ್ಯಕ್ಕೆಲ್ಲ
ಸರ್ವ ರೀತಿಲಿ ಕೆಟ್ಟ ಜನ್ಮ ಪೊರೆಸಲ್ಲ
ಅತ್ತೆ ತನ್ನಯ ಮಗಗೆ ಮೃತ್ಯುವು ಎಂತೆಂಬುವಳು
ಹುಟ್ಟಿದಾ ಮನೆಯವರು ದೂಷಿಸುವರು
ಎಷ್ಟು ಹೇಳಲಿ ಬಹಳ ತುಚ್ಛವನೆ ಮಾಡುವರು
ಅಕ್ಕತಂಗಿಯರಿಗೆ ದಿಕ್ಕು ಎಂಬುವರು
ಉಪಕಾರ ಮಾಡಿದರೆ ಗತಿಯು ನೀನೆಂಬುವರು
ಅತಿ ಶ್ರಮವೆಂದರೂ ಆದರಿಸರು
ವಿಪರೀತ ಹಣವಿದ್ದರಪಹರಿಸಿ ತಿಂಬುವರು
ಅತಿ ದೈನ್ಯದಿಂದ ಬೇಡೆ ಬಾಯ ಬಡಿಸುವರು
ಚಾಕರಿಯ ಮಾಡಿದರೆ ಆಚೀಚೆಲಾಡುವರು
ರಾಶಿ ಅನ್ನವನುಂಡಳೆಂದು ದೂರುವರು
ಈಸು ಸೈರಿಸಿ ಕೊಂಡು ಏಕಾಗ್ರದಲಿ ಕುಳಿತು
ಶ್ರೀಶ ಪುರಂದರವಿಠಲನ ನೆನೆಯೆ ನಾರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments