ರತುನ ದೊರಕಿತಲ್ಲ ಎನಗೆ ದಿವ್ಯ ರತುನ ದೊರಕಿತಲ್ಲ
( ರಾಗ: ಬಿಲಹರಿ( ಭೀಮ್ ಪಲಾಸ್ ) ಆಟತಾಳ(ದೀಪಚಂದಿ) )
ರತುನ ದೊರಕಿತಲ್ಲ ಎನಗೆ ದಿವ್ಯ-
ರತುನ ದೊರಕಿತಲ್ಲ ||ಪ||
ರತುನ ದೊರಕಿತು ಎನ್ನ ಜನ್ಮ ಪ-
ವಿತ್ರವಾಯಿತು ಈ ದಿನವು ನಾ
ಯತುನಗೈವುತ ಬರುತಿರಲು ಪ್ರ-
ಯತನವಿಲ್ಲದೆ ವಿಜಯರಾಯರೆಂಬ ||ಅ. ಪ||
ಪಥದಿ ನಾ ಬರುತಿರಲು ಥಳಥಳವೆಂದು
ಅತಿಕಾಂತಿ ಝಳಪಿಸಲು ಬೆರಗಾಗುತ್ತ
ಅತಿಚೋದ್ಯವ ಕಾಣಲು ಸೇವಿಸುತಿರೆ
ಸತತ ಕರಪಿಡಿದಾದರಿಸಿ ಮನೋ
ರಥವ ಪೂರೈಸುತಲಿ ದಿವ್ಯ ಸ-
ನ್ಮತಿಯ ಪಾಲಿಸಿ ಮೋಕ್ಷ ಸುಪಥವ
ಅತಿಶಯದಿ ತೋರುತಲಿ ಪೊರೆಯುವ ||೧||
ಜ್ಞಾನವೆಂಬೋ ಪುತ್ಥಳಿ ಕಂಬಿಯಲಿ
ಅಣಿಮುತ್ತಿನ ಭಕ್ತಿಲಿ ಸುಕೃತಮಾತಾ
ನಾನಾ ವಿಧ್ಹ್ ವಳದಲಿ ಸೇರಿಸುತಿರೆ
ಪ್ರಾಣಪದಕವೆಂಬ ಮಾಲಾನು-
ಮಾನವಿಲ್ಲದೆ ಕೊರಳಿಗ್ಹಾಕುತ
ಗಾನದಿಂ ಕುಣಿಯುತಲಿ ಪಾಡುತ
ದೀನ ಜನರುದ್ಧಾರ ಗಯ್ಯುವ ||೨||
ಶೋಧಿಸಿ ಗ್ರಂಥಗಳ ಸುಳಾದಿಯ
ಮೋದದಿಂದಲಿ ಬಹಳ ಕವಿತೇ ಮಾಡಿ
ಸಾಧುಜನಕೆ ಸುಕಾಲ ಆನಂದವಿತ್ತು
ವಾದಿ ಜನರನು ಗೆದ್ದು ವಾದಿಸಿ
ಮಾಧವ ಜಗನ್ನಾಥವಿಠಲನ
ಪಾದಕಮಲಕೆ ಮಧುಪನಂದದಿ
ಸಾದರದಿ ತೋರಿಸುತ ಮೆರೆಯುವ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments