ರಕ್ಷಿಸೋ ಎನ್ನ ರಕ್ಷಿಸೋ

ರಕ್ಷಿಸೋ ಎನ್ನ ರಕ್ಷಿಸೋ

( ಪೂರ್ವಿ ರಾಗ ಅಷ್ಟತಾಳ) ರಕ್ಷಿಸೋ ಎನ್ನ ರಕ್ಷಿಸೋ ||ಪ|| ರಕ್ಷಿಸು ಎನ್ನನು ಅಕ್ಷಯಗುಣಪೂರ್ಣ ಲಕ್ಷುಮಿರಮಣನೆ ಪಕ್ಷಿವಾಹನನೆ ||ಅ.ಪ|| ಪಾದವಿಲ್ಲದೆ ಜಲದೊಳು ಮುಳುಗಾಡಿ ವೇದಚೋರಕನನ್ನು ಸೀಳಿ ಬಿಸಾಡಿ ವೇದಾಚಲದೊಳು ನಿಂತು ಕೈ ನೀಡಿ ಸಾಧು ಸಜ್ಜನಪಾಲ ನೀ ದಯಮಾಡಿ||೧|| ವಾರಿಧಿಮಥನದಿ ಸುರರಿಗೆ ಒಲಿದು ಮೇರುಮಂದರವನ್ನು ನೀ ಹೊತ್ತೆ ಬಲಿದು ವಾರಿಜಾಕ್ಷನೆ ವೈಕುಂಠದಿಂದಿಳಿದು ಊರಿದೆ ಚರಣವ ಗಿರಿಯೊಳು ನಲಿದು ||೨|| ಧರಿಣಿಯ ಒಯ್ದ ದಾನವಗಾಗಿ ನೀನು ಹರಣದ ಸೂಕರನಂತಾದುದೇನು ಚರಣಸೇವಕರಿಗೆ ನೀ ಕಾಮಧೇನು ಕರುಣದಿ ಸಲಹೆನ್ನ ನಂಬಿದೆ ನಾನು ||೩|| ತರಳನು ಕರೆಯೆ ಕಂಬದೊಳುದಿಸಿದೆಯೊ ದುರುಳದಾನವರ ಪ್ರಾಣವ ವಧಿಸಿದೆಯೊ ಕರುಳಮಾಲೆಯ ಕೊರಳೊಳು ಧರಿಸಿದೆಯೊ ಮರಳಿ ಬಂದವ ಫಣಿಗಿರಿಯನೇರಿದೆಯೊ ||೪|| ಕೋಮಲರೂಪದಿ ಭೂಮಿಯನಳೆದೆ ಆ ಮಹಾ ಬಲಿಯ ಪಾತಾಳಕೆ ತುಳಿದೆ ಸ್ವಾಮಿ ಪುಷ್ಕರಣಿಯ ತೀರದಿ ಬೆಳೆದೆ ಪ್ರೇಮದಿ ಭಕ್ತರ ಕಾಮಿಸಿ ಪೊರೆದೆ ||೫|| ತಾತನಪ್ಪಣೆಯಂತೆ ಮಾತೆಗೆ ಮುನಿದೆ ಜಾತಿಕ್ಷತ್ರಿಯರ ವಿಘಾತಿಸಿ ತರಿದೆ ನೂತನವಾಗಿಹ ನಾಮದಿ ಮೆರೆದೆ ಧಾತುಗೆಟ್ಟೆನು ಸ್ವಧೈರ್ಯಗಳಿರದೆ ||೬|| ದಶರಥನುದರದಿ ಶಿಶುವಾಗಿ ಬಂದೆ ವಸುಮತಿತನುಜೆಯ ಕುಶಲದಿ ತಂದೆ ಅಸುರರ ಹೆಸರನುಳಿಸದೆ ನೀ ಕೊಂದೆ ಕುಸುಮನಾಭನೆ ಶೇಷಗಿರಿಯಲ್ಲಿ ನಿಂದೆ ||೭|| ಮಧುರೆಯೊಳುದಿಸಿ ಗೋಕುಲದಲ್ಲಿ ಬೆಳೆದೆ ಉದಧಿಯ ಮಧ್ಯದಿ ದುರ್ಗವ ಬಲಿದೆ ಹದಿನಾರು ಸಾವಿರ ಸತಿಯರ ನೆರೆದೆ ಉದಯವಾದೆಯೊ ವೇದಗಿರಿಯೊಳು ನಲಿದೆ ||೮|| ಶಶಿಮುಖಿಯರನು ಮೋಹಿಸುವಂಥ ಬಗೆಗೆ ವ್ಯಸನವ ಬಿಡುವುದುಚಿತವೇನೊ ನಿನಗೆ ವಸುಧೆಗುತ್ತಮ ಎಸೆವಂಥ ಗಿರಿಯೊಳು ಹಸನಾಗಿ ನಿಂತಿಹ ಚರಣ ಸನ್ನಿಧಿಯೊಳು ||೯|| ವಾಜಿಯನೇರಿ ನೇಜಿಯ ಪಿಡಿದೆ ಮಾಜುವ ಕಲಿಯನ್ನು ಕಡೆಯೊಳು ಕಡಿದೆ ಮೂಜಗದೊಡೆಯನ ಮನದೊಳು ಇಡುವೆ ಮಾಜ ಬೇಡೆಲೊ ವೇಂಕಟೇಶ ಎನ್ನೊಡವೆ ||೧೦|| ಹತ್ತವತಾರದ ವಿಸ್ತಾರದಿಂದ ಕರ್ತುವರಾಹ ತಿಮ್ಮಪ್ಪನು ನಿಂದ ಭೃತ್ಯವತ್ಸಲನಾಗಿ ಭೂಮಿಗೆ ಬಂದ ಅರ್ಥಿಯೊಳ್ಭಕ್ತರ ಸಲಹುವೆನೆಂದ ||೧೧|| --- ರಚನೆ- ನೆಕ್ಕರ ಕೃಷ್ಣದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು