ಯುಕ್ತಿಯಿಂದ ಭಕ್ತಿ ಮಾಡಲಿಕ್ಕೆ ಶಕ್ತನಲ್ಲ ನಾ
(ಭೈರವಿ ರಾಗ ದಾದರಾ ತಾಳ)
ಯುಕ್ತಿಯಿಂದ ಭಕ್ತಿ ಮಾಡಲಿಕ್ಕೆ ಶಕ್ತನಲ್ಲ ನಾ
ಮುಕ್ತಿಯೋಗ್ಯ ಮಾಡೊ ಭಾವಭೋಕ್ತ ಕೃಪಾನಿಧೆ ||ಧ್ರುವ||
ಧ್ಯಾನ ಮೌನ ಸ್ನಾನ ಸಂಧ್ಯಾ ಖೂನ ಗುರುತು ಅರಿಯೆ ನಾ
ನ್ಯೂನ ಪೂರ್ಣ ನೋಡದೆನ್ನ ರಕ್ಷಿಸೋ ದಯಾನಿಧೆ ||೧||
ಹೀನದೀನ ಜ್ಞಾನಶೂನ್ಯ ದಾನಧರ್ಮ ಅರಿಯೆ ನಾ
ನೀನೆ ಕಾಯಬೇಕು ಎನ್ನ ಕರುಣದಿ ಕೃಪಾನಿಧೆ ||೨||
ದುರುಳ ದುರ್ವಾಸನೆಯ ದುರಾಚಾರಿ ದುರಾತ್ಮ ನಾ
ತರಣೋಪಾಯ ತೋರಿಸೆನ್ನ ಹೊರೆಯೊ ದಯಾನಿಧೆ ||೩||
ಅರುಹುಕುರುಹುನರಿಯದಿಹ ಮರುಳ ಮಂಕ ತರಳ ನಾ
ಕರವ ಪಿಡಿದು ಧರೆಯೊಳಿನ್ನು ತಾರಿಸೊ ದಯಾನಿಧೆ ||೪||
ಆಶಪಾಶದಲ್ಲಿ ವಾಸವಾದ ದೋಷರಾಶಿ ನಾ
ಭಾಸಿ ಪಾಲಿಸು ಪುಣ್ಯ ಪ್ರಕಾಶಿಸೊ ದಯಾನಿಧೆ ||೫||
ಏಸು ಜನ್ಮ ಮೋಸಹೋಗಿ ಘಾಸಿಯಾದ ಜೀವ ನಾ
ದಾಸರೊಡನೆ ಕೂಡಿಸೊ ಭಾಸ್ಕರ ದಯಾನಿಧೆ ||೬||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments