ಯಾವಾಗಲು ಹೇಳಬಾರದೆ
( ರಾಗ ಆರಭಿ ಅಟ ತಾಳ)
ಯಾವಾಗಲು ಹೇಳಬಾರದೆ, ವಾಸು-
ದೇವನೆ ಕೈ ಬಿಡಬೇಡವೆಂದೆನುತಲಿ ||ಪ||
ಇಕ್ಕಿ ಎರೆವರಿಲ್ಲ ಇಷ್ಟ ಬಂಧುಗಳಿಲ್ಲ
ಅಕ್ಕತಂಗಿಯರಣ್ಣ ತಮ್ಮರಿಲ್ಲ
ಒಕ್ಕಟಿಯಾಗಿ ನಾ ಬಳಲುತ್ತಲಿ ಸದಾ
ದುಃಖಪಡುವೆನೆಂದು ರಕ್ಕಸಾಂತಕನೊಳು ||
ಮಡದಿ ಮಕ್ಕಳು ಇಲ್ಲ ಒಡವೆ ವಸ್ತುಗಳಿಲ್ಲ
ಪಡೆದ ತಾಯಿತಂದೆಯೊಬ್ಬರಿಲ್ಲ
ಎಡವಿ ಬೀಳುತಲಿರೆ ಎತ್ತಿಕೊಂಬುವರಿಲ್ಲ
ಒಡೆಯನೆ ಕೈ ಬಿಡಬೇಡವೆಂದೆನುತಲಿ ||
ಮಾಡಿಟ್ಟ ಮನೆಯಿಲ್ಲ ಕೂಡಿಟ್ಟ ಧನವಿಲ್ಲ
ಆಡಿಸಿಕೊಳ್ಳಲು ಮಕ್ಕಳಿಲ್ಲ
ಪಾಡಿ ನಿನ್ನನು ಸ್ತುತಿ ಮಾಡುವೆನೆಂದರೆ
ಮೂಢರೊಳಗೆ ಬಲು ಮೂಢನಾಗಿಹೆನೆಂದು ||
ಇಷ್ಟರ ಮೇಲೆ ಕೈ ಬಿಟ್ಟೆಯಾದರೆ, ಇನ್ನು
ಶಿಷ್ಟರು ನೋಡಿ ನಗದಿಹರೆ
ಇಷ್ಟಾರ್ಥ ಕೊಡುವಂಥ ದೇವನಲ್ಲವೆಂದು
ಸೃಷ್ಟಿಯೊಳಪಕೀರ್ತಿ ತಟ್ಟದೆ ಇರದೆಂದು ||
ಮೋಕ್ಷದಾಯಕ ವಿಶ್ವರೂಪ ವಿಶ್ವಾತ್ಮಕ
ಸಾಕ್ಷಿಸ್ವರೂಪ ಸರ್ವೇಶ್ವರನೆ
ಸಾಕ್ಷಾತು ಶ್ರೀಗುರುಪುರಂದರವಿಠಲನೆ
ರಕ್ಷಿಸಬೇಕೆಂದು ಲಕ್ಷ್ಮೀವಲ್ಲಭನೊಳು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments