ಯಾರಿಗೆ ಯಾರುಂಟು ಎರವಿನ ಸಂಸಾರ

ಯಾರಿಗೆ ಯಾರುಂಟು ಎರವಿನ ಸಂಸಾರ

ರಾಗ ಬಿಲಹರಿ/ಅಟ್ಟ ತಾಳ ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ || ಪಲ್ಲವಿ || ಬಾಯಾರಿತು ಎಂದು ಬಾವಿನೀರಿಗೆ ಪೋದೆ ಬಾವಿಲಿ ಜಲ ಬತ್ತಿ ಬರಿದಾಯ್ತು ಹರಿಯೆ || ೧ || ಬಿಸಿಲು ಗಾಳಿಗಾಗಿ ಮರದ ನೆರಳಿಗೆ ಪೋದೆ ಮರ ಬಗ್ಗಿ ಶಿರದ ಮೇಲೊರಗಿತೋ ಹರಿಯೆ || ೨ || ಅಡವಿಯೊಳ್ಮನೆ ಮಾಡಿ ಗಿಡಕೆ ತೊಟ್ಟಿಲು ಕಟ್ಟಿ ತೊಟ್ಟಿಲಿನ ಶಿಶು ಮಾಯವಾಯಿತು ಹರಿಯೆ || ೩ || ತಂದೆ ಶ್ರೀ ಪುರಂದರವಿಠಲ ನಾರಾಯಣ ನಾ ಸಾಯೋ ಹೊತ್ತಿಗೆ ನೀ ಕಾಯೋ ಹರಿಯೆ || ೪ || ~~~~ * ~~~~ [ಹರಿದಾಸರ ವೈರಾಗ್ಯ ಈ ಪದದಲ್ಲಿ ವ್ಯಕ್ತವಾಗಿದೆ. ಸಂಸಾರವೆಂಬುದು ಸ್ಥಿರವಲ್ಲ; ಜೀವನ ಸ್ವರೂಪೋದ್ದಾರಕ್ಕೂ ಅನುಕೂಲವಾಗಲಾರದು. ಸಂಸಾರದ ಸುಖಗಳನ್ನೇ ನಂಬಿಕೊಂಡಿರುವ ಮನುಷ್ಯರಿಗೆ ಒದಗುವ ಬವಣೆಯನ್ನು ಇಲ್ಲಿ ಸ್ವಾರಸ್ಯವಾಗಿ ನಿರೂಪಿಸಿದ್ದಾರೆ.] ಯಾರಿಗೆ ಯಾರುಂಟು -- ’ಋಣಾನುಬಂಧ ರೂಪೇಣ ಪಶುಪತ್ನಿಸುತಾಲಯಃ’ ಎನ್ನುವ ಮಾತಿನ ಛಾಯೆ. ಹಿಂದೆ ಮಾಡಿದ ಕರ್ಮಕ್ಕೆ ಫಲವಾಗಿ ಈ ಜನ್ಮದ ನೆಂಟು, ಕುಟುಂಬ; ಕರ್ಮ ತೀರಿತೆಂದರೆ ನೆಂಟೂ ಹರಿಯುತ್ತದೆ. ಕುಟುಂಬ ಬಯಲಾಗುತ್ತದೆ. ಆದ್ದರಿಂದ ಇದು ’ಎರವಿನ ಸಂಸಾರ’, ಸಾಲ ತೀರಿಸಲು ಉಂಟಾದದ್ದು. [ಪುರಂದರ ಸಾಹಿತ್ಯ ದರ್ಶನ - ಸಂಪುಟ ೧]
ದಾಸ ಸಾಹಿತ್ಯ ಪ್ರಕಾರ
ಬರೆದವರು