ಯಾಕೆ ಕಕುಲಾತಿ ಪಡುವೆ
( ರಾಗ ಕಲ್ಯಾಣಿ ಅಟತಾಳ)
ಯಾಕೆ ಕಕುಲಾತಿ ಪಡುವೆ ಎಲೆ ಮರುಳೆ ||ಪ||
ಲೋಕ ಮೂರನು ಆಳ್ವ ಶ್ರೀನಿವಾಸನು ನಮ್ಮ
ಸಾಕಲಾರದೆ ಬಿಡುವನೆ ಮರುಳೆ ||ಅ||
ಕಲ್ಲುಪಡೆಯಲ್ಲಿ ಹುಟ್ಟಿರುವ ಮಂಡೂಕಕೆ
ಅಲ್ಲಿ ತಂದಿಡುವರಾರೋ
ಎಲ್ಲವನು ತೊರೆದಿರುವ ಅರಣ್ಯವಾಸಿಯನು
ಅಲ್ಲೆ ಸಲಹದೆ ಬಿಡುವನೆ ಮರುಳೆ ||
ಅಡವಿಯೊಳು ಹುಟ್ಟುವ ಮೃಗಜಾತಿಗಳಿಗೆಲ್ಲ
ಬಿಡದೆ ತಂದಿಡುವರಾರೋ
ಗಿಡದಿಂದ ಗಿಡಗಳಿಗೆ ಹಾರುವ ಪಕ್ಷಿಗೆ
ಪಡಿಯನಳೆಯದೆ ಬಿಡುವನೇ ಮರುಳೆ ||
ಎಂಭತ್ತನಾಲ್ಕು ಲಕ್ಷ ರಾಶಿಗಳನ್ನು
ಇಂಬಾಗಿ ಸಲಹುತಿಹನು
ನಂಬು ಶ್ರೀಪುರಂದರವಿಠಲನ ಚರಣವನು
ನಂಬಿದರೆ ಸಲಹದಿಹನೇ ಮರುಳೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments