ಯಾಕೆನ್ನ ಎಬ್ಬಿಸಿದೆ
(ರಾಗ ಭೂಪಾಳಿ ಝಂಪೆತಾಳ)
ಯಾಕೆನ್ನ ಎಬ್ಬಿಸಿದೆ
ಶ್ರೀಹರಿಯ ಸೇವೆ ಧ್ಯಾನದ ಒಳಗಿದ್ದೆನೆ ||ಪ||
ಉದಯಕಾಲಕೆ ಎದ್ದು , ನದಿಯ ತೀರಕೆ ಹೋಗಿ
ಮೃತ್ತಿಕೆ ಶೌಚದಿಂದ ಮಲಮೂತ್ರ ಆತ್ಮ ಶುದ್ಧಿಗಳ ಮಾಡಿ
ನದಿಯಲಿ ನಿಂತು ಸ್ತೋತ್ರಂಗಳನೆ ಮಾಡಿ
ತೀರ್ಥಾಭಿಮಾನಿ ಪ್ರಾರ್ಥನಂಗಳನೆ ಮಾಡಿ
ಸ್ನಾನ ಸಂಧ್ಯಾನ ಜಪತಪಂಗಳನೆ ಮಾಡಿ
ಶ್ರೀಹರಿಯ ಧ್ಯಾನದಲಿ ನಾ ಮನೆಗೆ ಬರುತಲಿದ್ದೆ ||
ಆಕಳ ಸೆಗಣಿಯಲಿ ಭಾಗೀರಥಿ ಉದಕದಲಿ
ದೇವರ ಜಗುಲಿಯನು ಸಾರಿಸಿ ನಾನು
ಕಾರಣೆಗಳನು ತೆಗೆದು ಶಂಖಚಕ್ರ ಸ್ವಸ್ತಿಕ ಪದ್ಮದಿಂದ
ಬಗೆಬಗೆ ಬೃಂದಾವನ ರಂಗವಲಿಯನಿಟ್ಟು
ಶ್ರೀಹರಿಯ ವಂದಿಸಿ ನಾನು ಕೈಯ ಮುಗಿಯುತಲಿದ್ದೆ ||
ಸುವರ್ಣದ ಮಣೆ ಕುಂದಣದ ಕೀಲು ಬೆಳ್ಳಿಪೀಠದ ಮಣೆಗಳು
ಭಂಗಾರದ ರಾಜವರ್ಣದ ಮಣೆಗಳು
ಈ ಪರಿ ಮಣೆಗಳ ತಾರತಾರಕೆ ಇಟ್ಟು
ಶ್ರೀಹರಿಗೆ ವಂದಿಸಿ ನಾನು ಕೈಯ ಮುಗಿಯುತಲಿದ್ದೆ ||
ಸುವರ್ಣವಾದ ಛತ್ರಿಯ ಮಂಟಪ , ಬೆಳ್ಳಿಚೂಡದ ಮಂಟಪ
ಭಂಗಾರದ ರಾಜವರ್ಣದ ಮಂಟಪ
ಕಂಭವ ನಿಲಿಸಿ ಸಂದು ಸಂದು ಬೋದಿಗೆ
ದುಂಡು ಮುತ್ತಿನ ಕುಚ್ಚು ನಾನಿಡುತಲಿದ್ದೆ ||
ಸೂರ್ಯಪೀಠದ ಮುಖ, ಮೇಲೆ ಹಾಸಿಗೆಗಳು
ರತ್ನದ ಹುವ್ವುಗಳೆ ಬುಟ್ಟಿದಾರಿ ಜರತಾರಿ ಹುವ್ವುಗಳೆ
ಎಡೆಗೆಡೆಗೆ ಬೋದಿಗ್ಗೆ ಬಿಗಿದು ಮುತ್ತಿನ ಸುತ್ತಿ
ಜಗದೊಡೆಯನಾದಗೆ ಅಣಿಮಾಡುತಲಿದ್ದೆ ||
ಕಂಚು ಹಿತ್ತಾಳೆ ಸುವರ್ಣದಮಯ ಕುಂದಣದ ಕೀಲು
ಸಾಲುದೀವಿಗೆಗಳೆ ಸಾಲುದೀವಿಗೆ ಕಟ್ಟು ದೀವಿಗೆಗಳ ಹಚ್ಚಿಟ್ಟು
ತುಪ್ಪದ ದೀವಿಗೆಯೆ ಬಗೆಬಗೆ ತುಂಬಿಟ್ಟ ಹಲಿಗಾರತಿ
ಸಾಲುದೀವಿಗೆಯನ್ನು ಲಕ್ಷದೀವಿಗೆಯನ್ನು
ವಿಷ್ಣುಮೂರುತಿಗೆ ನಾ ಕೈಯ ಮುಗಿಯುತಲಿದ್ದೆ ||
ಉತ್ತಮವಾಗೋದು ಮೊದಲೆತ್ತೋದು
ಧೂಪಾರತಿ ಒಡನೇ ಏಕಾರತಿಯೇ
ಪಂಚವರ್ಣದಾರತಿ ಕರ್ಪೂರದಾರತಿ
ಶ್ರೀಹರಿಗೆ ಅರ್ಪಿಸಿ ನಾನು ಕೈಯ ಮುಗಿಯುತಲಿದ್ದೆ ||
ಮಂಡಲಂಗಳ ಮಾಡಿ ರಂಗವಲ್ಲಿಯ ಹಾಕಿ
ಹಂಡಾಹಂಡದಲಿಯಿಳಿವಿ
ಭೂಮಂಡಲಾಧಿಪತಿ ನಿನಗೆ ಅರ್ಪಿತವೆಂದು ತಂದು
ನೈವೇದ್ಯಿಟ್ಟು ಶ್ರೀಹರಿಗೆ ಅರ್ಪಿಸುತಲಿದ್ದೆ ||
ಅರವತ್ತು ಜಿನಸಿನ ಪರಿಪರಿ ಶಾಕಗಳು
ಕರಿದು ಸಾತಾಳಿಸಿದ ಬಗೆಬಗೆ ಲವಣಶಾಕಗಳು
ಈ ಪರಿಯಿಂದಲಿ ಎಡೆಗಳನೆ ಮಾಡಿ ತಂದು
ನೈವೇದ್ಯಿಟ್ಟು ಶ್ರೀಹರಿಗೆ ಅರ್ಪಿಸುತಲಿದ್ದೆ ||
ಐದು ಜಿನಸಿನ ಪರಮಾನ್ನವ ಮಾಡಿ
ಸಣ್ಣಕ್ಕಿ ಶಾಲ್ಯನ್ನ ಚಿತ್ರಾನ್ನ ದಧ್ಯನ್ನ ಮೊಸರುಅನ್ನ
ಮೊಸರು ಅನ್ನವ ಮಾಡಿ
ಮಧುರೆಯ ಕೃಷ್ಣ ನಿನಗೆ ಅರ್ಪಿತವೆಂದೆ ||
ಕರಿ ಆಕಳ ಹಾಲು ಕೆನೆಮೊಸರುಗಳು
ನೊರೆಹಾಲು ಘೃತಗಳನು
ಸಕ್ಕರೆ ಬೆರೆಸಿದ ನೊರೆಹಾಲುಗಳನೆ ತಂದು
ಉಡುಪಿಯ ಕೃಷ್ಣ ನಿನಗೆ ಅರ್ಪಿತವೆಂದೆ ||
ಅಷ್ಟಭೋಗದ ಅಡಿಕೆ ಕರ್ಪೂರದ ವೀಳ್ಯ
ಹೆಚ್ಚಿನ ಬಿಡಿಎಲೆಯೇ
ಸುಣ್ಣ ಸಹಿತವಾದ ಲವಂಗವು ಏಲಕ್ಕಿ
ಶ್ರೀ ಹರಿಗೆ ಅರ್ಪಿಸಿ ನಾನು ಕೈಯ ಮುಗಿಯುತಲಿದ್ದೆ ||
ಉತ್ತಮದ ರಾಮ, ಅಯೋಧ್ಯೆಯ ರಾಮ
ಪಟ್ಟಾಭಿರಾಮನೆ ಸೀತಾಪತಿ ಜಾನಕೀಮನೋಹರ
ಹಾಸಿಗೆಯನು ಹಾಕಿ ಅಣಿಮಾಡುತಲಿದ್ದೆ ||
ಬೆಣ್ಣೆಕಳ್ಳನು ಕೃಷ್ಣ ,ಚಿನ್ನಮಾಯದ ಕೃಷ್ಣ
ವದನ ತೋರಿದ ಕೃಷ್ಣನೇ
ರುಕ್ಮಿಣೀವಲ್ಲಭ ಜಾನಕೀಮನೋಹರ
ಇಂದು ಶ್ರೀಕೃಷ್ಣಗೆ ಕೈಯ ಮುಗಿಯುತಲಿದ್ದೆ ||
ಪ್ರಳಯಕಾಲದಲ್ಲಿ ಆಲದೆಲೆಯ ಮೇಲೆ
ಚತುರ್ಮುಖ ಪರಬ್ರಹ್ಮನೇ
ಮಲಗಿಹ ವಿರಾಟರೂಪನಾಗಿ
ಈರೇಳು ಭುವನದ ಉದರದಲ್ಲಿ ಇಟ್ಟ
ಪುರಂದರವಿಠಲನ್ನ ಧ್ಯಾನದೊಳಗೆ ಇದ್ದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments