ಯಮ ತನ್ನ ಪುರದಿ ಸಾರಿದನು
( ರಾಗ ಕಾಮವರ್ಧನಿ/ಪಂತುವರಾಳಿ ಛಾಪುತಾಳ)
ಯಮ ತನ್ನ ಪುರದಿ ಸಾರಿದನು, ನಮ್ಮ
ಕಮಲನಾಭನ ದಾಸರನು ಮುಟ್ಟದಿರೆಂದು ||ಪ||
ಭುಜದಲೊಪ್ಪುವ ಶಂಖ ಚಕ್ರ ಮುದ್ರಾಂಕಿತ
ನಿಜ ದ್ವಾದಶ ನಾಮ ಧರಿಸಿಪ್ಪರ
ತ್ರಿಜಗ ವಂದಿತ ತುಳಸಿಯ ಮಾಲೆ ಧರಿಸಿದ
ಸುಜನರುಗಳ ಕೆಣಕದೆ ಬನ್ನಿರೊ ಎಂದು ||
ಬೇವ್ಮಡಿಯನುಟ್ಟು ಬೆನ್ನು ಸಿಡಿಯನೇರಿ
ಚಿಮ್ಮುತ ಓಲಿ ಬೊಬ್ಬೆಗಳಿಡುತ
ಕರ್ಮಕ್ಕೆ ಗುರಿಯಾಗಿ ಪ್ರಾಣಿಹಿಂಸೆಯ ಮಾಳ್ಪ
ಬ್ರಹ್ಮತ್ಯಕಾರರ ಎಳೆದು ತನ್ನಿರೋ ಎಂದು ||
ತಾಳದಂಡಿಗೆ ನೃತ್ಯಗೀತ ಸಮ್ಮೇಳದಿ
ಊಳಿಗವನು ಮಾಳ್ಪ ಹರಿದಾಸರ
ಕೇಳುತ್ತಲೇ ಕರವೆತ್ತಿ ಮುಗಿದು ಯಮ-
ನಾಳುಗಳೆಂದು ಹೇಳದೆ ಬನ್ನಿರೊ ಎಂದು ||
ಗುರು ನಿಂದಕರ ಹಿರಿಯರ ದೂಷಿಸುವರ
ಪರಧನಗಳನಪಹರಿಸುವರ
ಅರವಾಣಿಕಾರರ ಉರುಳಿಸಿ ಬಾಯೊಳು
ಅರಗನು ಕಾಯಿಸಿ ಸುರಿದು ಕೊಲ್ಲಿರೊ ಎಂದು ||
ಮಾತಾಪಿತರ ದುರ್ಮತಿಯಿಂದ ಬೈಯುವ
ಪಾತಕರ ಪರದ್ರೋಹಿಗಳ
ನೀತಿಯನರಿಯದ ನರರ ತುತಿಸುವರ
ಘಾತಿಸಿ ಎಳೆ ತಂದು ಕಡಿದು ಕೊಲ್ಲಿರೊ ಎಂದು ||
ಅನ್ಯದೈವ ಅನ್ಯಮಂತ್ರ ತಂತ್ರವ ಬಿಟ್ಟು
ಪನ್ನಗಶಯನನೆ ಗತಿಯೆನ್ನುತ
ಉನ್ನತ ಪುರಂದರವಿಠಲನ ಭಜಿಪ ಪ್ರ-
ಸನ್ನರುಗಳ ಕೆಣಕದೆ ಬನ್ನಿರೊ ಎಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments