ಮೊಸರ ಸುರಿದು ಓಡುವ

ಮೊಸರ ಸುರಿದು ಓಡುವ

(ರಾಗ ಆನಂದಭೈರವಿ ಆದಿ ತಾಳ ) ಮೊಸರ ಸುರಿದು ಓಡುವ, ಈ ಮಾಯದ ಶಿಶುವ ತೋರಿಸು ಎನಗೆ ಹುಸಿಯನಾಡುವುದೇಕೆ ರಂಗಗೆ ಮೊಸರೆಂಬ ಪೆಸರು ಪೇಳಿದರಾಗದು, ಅಮ್ಮಯ್ಯ || ಪ|| ಮಂದಿರವನ್ನು ದಾಟಿ ನಮ್ಮ ರಂಗ ಬಂದುದುಂಟೇನೆ ಎಂದು ಹಿಂದುಮುಂದರಿಯದೆ ದೂರಬಾರದು ನಮ್ಮ ಕಂದ ಗೋವಳರಾಯನ || ಬೆಣ್ಣೆಯನಿಕ್ಕಿದರೆ ನಮ್ಮ ರಂಗ ಉಣಲೊಲ್ಲನಾ ದಿನಕೆ ಸಣ್ಣವನೆಂದು ಸಟೆಯ ಪೇಳಿದರೆ ಪುಣ್ಯಪಾಪಗಳಿಲ್ಲವೆ || ಕೆನೆಹಾಲು ಕೊಳ್ಳೆಂದರೆ ನಮ್ಮ ರಂಗ ಮುನಿದು ಹಾರುವನು ಕಾಣೆ ಮನೆ ಮನೆಗಳ ಪೊಕ್ಕು ಕದ್ದನೆಂದರೆ ನಮ್ಮ ಮನಕೆ ಸೋಜಿಗವಲ್ಲವೆ || ಆರಿಗೂ ಮಕ್ಕಳಲ್ಲೆ ನಮ್ಮ ರಂಗ ಓರ್ವನೆ ಸರಿಯೆಂದರೆ ಆರ ಮಕ್ಕಳು ಹೋದರನ್ಯಾಯದಲಿ ದೂರಬಾರದು ಬಲ್ಲಿರೆ || ಅತ್ತಿತ್ತ ಹೋಗಲಿಲ್ಲ, ರಂಗಯ್ಯಗೆ ಅಪವಾದ ಬಂದಿತಲ್ಲ ನಿತ್ಯದಿ ಮಧುಸೂದನನ ಕಂಡರೆಲ್ಲ ಸತ್ಯದಿ ಹೇಳೆನಗೆ || ಕಂತುಪಿತನ ನಾಮವ ಕೇಳೆಲೆ ಗೋಪಿ ಅಂತರಂಗದಿ ನೆನೆದು ಎಂಥವನಾದರು ದೇವ ಕುಲೋತ್ತಮ ಅಂಥವನಲ್ಲ ಕಾಣೆ || ಹೊತ್ತು ಕಳೆಯುವುದೇಕೆ, ನಿಮಗೆಲ್ಲ ಅತ್ತೆ ಮಾವಂದಿರಿಲ್ಲೆ ಪಥ್ಯವಾಗಿದೆ ನಿಮ್ಮ ಮನಸಿಗೆ, ಬಲರಾಮ- ಕೃಷ್ಣರ ನೋಡುವೋದು || ಕಾಣದೆ ಇರಲಾರಿರೆ ನಮ್ಮ ಮುಖ್ಯ- ಪ್ರಾಣವಲ್ಲಭ ರಂಗನ ಜಾಣತನವ ಬಿಟ್ಟು ಕಾಣಿಸು ಬೇಗದಿ ಪ್ರಾಣ ಗೋವಳರಾಯನ || ಚಂದವಾಯಿತು ಗೋಪ್ಯಮ್ಮ, ನೀನೊಬ್ಬಳೆ ಕಂದನ ಪಡೆದೆಯಮ್ಮ ಮಂದಿರದಲ್ಲಿದ್ದ ಪುರಂದರವಿಠಲನ್ನ ತಂದೊಮ್ಮೆ ತೋರೆಮಗೆ ಗೋಪ್ಯಮ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು