ಮೆಚ್ಚದಿರು ಈ ಭಾಗ್ಯ

ಮೆಚ್ಚದಿರು ಈ ಭಾಗ್ಯ

(ರಾಗ ಕಾಂಭೋಜ ಝಂಪೆ ತಾಳ ) ಮೆಚ್ಚದಿರು ಈ ಭಾಗ್ಯ ಹುಚ್ಚು ಮಾನವ ||ಪ || ವೆಚ್ಚವಾಗ್ಹೋಗುವುದು ಏಸೊಂದು ಪರಿಯ ||ಅ|| ಹದಿನೆಂಟು ಕೋಟಿ ಧನ ಉದಯಕಾಲಕೆ ಬರಲು ಒದಗಿದಾಗಾಗಲೇನು ಕರ್ಣಗೆ ಹದವರಿದು ಹಾಗದಾ ಕಾಸಿಲ್ಲದೇ ಕೊಟ್ಟು ತುದಿಗೆ ಮಧ್ಯಾಹ್ನ ದಾರಿದ್ರನೆನಿಸುವನು || ಮುತ್ತು ಮಾಣಿಕ್ಯ ನವರತ್ನ ಚೌಕಳಿಗಳು ಎತ್ತ ನೋಡಿದರು ಸಿರಿ ಓಯೆಂಬಳು ಸತ್ಯ ಹರಿಶ್ಚಂದ್ರನು ಮತ್ತೆ ಸುಡುಗಾಡಿನಲಿ ಎತ್ತಲಿಲ್ಲವೆ ಹೆಣಕೆ ಹಾಗದಾ ಕಾಸ || ಬೆಳ್ಳಿ ಭಂಗಾರ ಹರಿವಾಣಗಳು ಮನೆಯೊಳಗೆ ತುಳುಕುತಿಹ ಕನಕದ ರಾಶಿಗಳು ಘಳಿಗೆಯೊಳು ಈ ಭಾಗ್ಯ ಕಾಡ ಬೆಳದಿಂಗಳು ಉಳಿದೊಬ್ಬರ ಕಾಣೆ ಚರಲಕ್ಷ್ಮಿಯೆಂದು || ದೇವತೆಗಳನೆ ಕೈಯೊಳ್ ಸೆರೆ ಪಿಡಿತಂ- ದವ ಬಲಿತಿಹ ರಾವಣನ ಬದುಕೇನಾಯಿತು ಜೀವರ ಪಾಡೇನು ನಾವು ದೊರೆಯೆಂಬೋದಕ್ಕೆ ಸಾವಿನ ಮನೆ ಪೊಕ್ಕು ಸಹಸಪಡಬಹುದೆ || ಇಂದು ಈ ಪರಿಯೊಳನಂತ ರೂಪಾದರು ಎಂತು ಪೇಳಲಿ ಇವರ ಪೆಸರುಗಳನು ಸಂತಸದಿ ವರದ ಪುರಂದರವಿಠಲನ ಅಂತರಂಗದಿ ಭಜಿಸಿ ಸುಖಿಯಾಗು ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು