ಮೂರ್ಖರಾದರು ಜನರು
(ರಾಗ ಮುಖಾರಿ. ಝಂಪೆ ತಾಳ )
ಮೂರ್ಖರಾದರು ಜನರು ಲೋಕದೊಳಗೆ ||ಪ||
ಏಕ ದೇವನ ಬಿಟ್ಟು ಕಾಕು ದೈವವ ಭಜಿಸಿ ||ಅ.ಪ||
ಒಂಟಿಯಲಿ ಹೆಂಡತಿಯ ಬಿಡುವಾತನೇ ಮೂರ್ಖ
ಗಂಟನೊಬ್ಬರ ಕೈಯಲಿಡುವಾತ ಮೂರ್ಖ
ನೆಂಟರಿಗೆ ಸಾಲವನು ಕೊಡುವಾತ ಮೂರ್ಖ, ಜನ-
ಕಂಟಕನಾಗಿರುವ ಕಡು ಮೂರ್ಖನಯ್ಯ ||
ಪಡೆದ ಮಕ್ಕಳ ಮಾರಿ ಒಡಲ ಪೊರೆವವ ಮೂರ್ಖ
ಮಡದಿ ಹುಟ್ಟಿದ ಮನೆಯಲಿರುವವನು ಮೂರ್ಖ
ಬಡತನವು ಬಂಡಾಗ ಬೈದುಕೊಂಬುವ ಮೂರ್ಖ
ದೃಢ ಭಕ್ತಿಯಿಲ್ಲದವ ಕಡು ಮೂರ್ಖನಯ್ಯ ||
ಮುಪ್ಪಿನಲಿ ಮದುವೆಯನು ಮಾಡಿಕೊಂಬುವ ಮೂರ್ಖ
ಸರ್ಪನಲಿ ಸರಸವಾಡುವನೆ ಮೂರ್ಖ
ಇಪ್ಪತ್ತ ಒಂದು ಕುಲ ಉದ್ಧರಿಸದವ ಮೂರ್ಖ
ಅಪ್ಪ ರಂಗಯ್ಯನ ಭಜಿಸದವ ಮೂರ್ಖ||
ರಾಮ ನಾಮವ ಭಜಿಸಿ ನೆನೆಯದವ ಮೂರ್ಖ
ಹೇಮವನು ಗಳಿಸಿ ಉಣದವನು ಮೂರ್ಖ
ಕಾಮದಲಿ ಹಿರಿಯಳ ಕೂಡಿಕೊಂಡವ ಮೂರ್ಖ
ಭೂಮಿದಾನವ ತೆಗೆದ ಭೂಪತಿಯು ಮೂರ್ಖ||
ಕಾಶಿಯಲಿ ದೇಹವನು ತೊಳೆಯದಿದ್ದವ ಮೂರ್ಖ
ಭೂಸುರರಿಗನ್ನವನು ಕೊಡದವನು ಮೂರ್ಖ
ಶೇಷಗಿರಿ ಕೃಷ್ಣನ ಭಜಿಸದಿದ್ದವ ಮೂರ್ಖ
ದಾಸನಾಗದ ಮನುಜ ಕಡು ಮೂರ್ಖನಯ್ಯ||
ಸತ್ತ ಕರುವಿನ ತಾಯ ಹಾಲ ಕರೆವವ ಮೂರ್ಖ
ಒತ್ತೆಯಿಲ್ಲದೆ ಸಾಲ ಕೊಡುವವನು ಮೂರ್ಖ
ಹತ್ತೆಂತು ಬಗೆಯಲ್ಲಿ ಹಂಬಲಿಸುವವ ಮೂರ್ಖ
ಹೆತ್ತ ತಾಯಿಯ ಬೈವ ಕಡು ಮೂರ್ಖನಯ್ಯ||
ಸ್ವಾಮಿ ನಾಮವ ಬಿಡದೆ ಭಜಿಸದಿದ್ದವ ಮೂರ್ಖ
ಸ್ವಾಮಿ ಗುರುಹಿರಿಯರಿಗೆ ಎರಗದವ ಮೂರ್ಖ
ನೇಮದಲಿ ಹರಿಯ ಕಥೆಯ ಕೇಳದವ ತಾ ಮೂರ್ಖ
ತಾಮಸರ ಕೂಡಿ ಕೊಂಬವನೆ ಕಡು ಮೂರ್ಖ||
ಉಂಡ ಮನೆಗೆರಡನ್ನು ಬಗೆಯುವಾತನೆ ಮೂರ್ಖ
ಕೊಂಡೆ ಮಾತನು ಕೇಳಿ ಕುಣಿವವನು ಮೂರ್ಖ
ಪುಂಡರೀಕಾಕ್ಷ ಶ್ರೀ ಪುರಂದರ ವಿಠಲನ
ಕೊಂಡಾಡಿ ಭಜಿಸದವ ಕಡು ಮೂರ್ಖನಯ್ಯ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments