ಮೂಢ ಬಲ್ಲನೆ ಜ್ಞಾನದೃಢಭಕ್ತಿಯ

ಮೂಢ ಬಲ್ಲನೆ ಜ್ಞಾನದೃಢಭಕ್ತಿಯ

(ರಾಗ ಮುಖಾರಿ. ಝಂಪೆ ತಾಳ ) ಮೂಢ ಬಲ್ಲನೆ ಜ್ಞಾನದೃಢಭಕ್ತಿಯ ಕಾಡಕಪಿ ಬಲ್ಲುದೆ ಮಾಣಿಕದ ಬೆಲೆಯ ||ಪ|| ಕೋಣ ಬಲ್ಲುದೆ ವೀಣೆ ನುಡಿಯುವ ಸುನಾದವನು ಗೋಣಿ ಬಲ್ಲುದೆ ಎತ್ತಿನ ದುಃಖವ ಪ್ರಾಣ ತೊಲಗಿದ ದೇಹ ಕಿಚ್ಚೇನು ಬಲ್ಲುದೆ ಕ್ಷೋಣಿಯೊಳು ಕುರುಡ ಬಲ್ಲನೆ ಹಗಲು ಇರುಳ || ಬಧಿರ ಬಲ್ಲನೆ ಸುಸಂಗೀತ ಸ್ವಾರಸ್ಯವನು ಚದುರ ನುಡಿಯಾಡಬಲ್ಲನೆ ಮೂಕನು ಕ್ಷುಧೆ ಇಲ್ಲದಾ ಮನುಜ ಅಮೃತಾನ್ನ ಸವಿದಪನೆ ಮಧುರ ವಚನವ ಬಲ್ಲನೆ ದುಷ್ಟ ಮನುಜ || ಅಜ ಬರೆದ ಬರೆಹವನು ತೊಳೆಯಬಲ್ಲನೆ ಜಾಣ ನಿಜಭಕ್ತಿ ಮುಕ್ತಿ ಸುಖವನ್ನು ಕೊಡುವಾ ಭುಜಗೇಂದ್ರ ಶಯನ ಸಿರಿ ಪುರಂದರ ವಿಠಲನ ಭಜಿಸಲರಿಯದವ ಬಲ್ಲನೆ ಮುಕ್ತಿ ಸುಖವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು