ಮುಂಜಾನೆಯೆದ್ದು ಗೋವಿಂದ ಎನ್ನಿ
(ರಾಗ ಆನಂದಭೈರವಿ ಅಟತಾಳ )
ಮುಂಜಾನೆಯೆದ್ದು ಗೋವಿಂದ ಎನ್ನಿ ||ಪ||
ನಮ್ಮನಂಜಿಪ ದುರಿತವು ದೂರವೆನ್ನಿ ||ಅ||
ಅಸುರಸಂಹಾರಿಯೆನ್ನಿ ದಶಶಿರವೈರಿಯೆನ್ನಿ
ಶಿಶುವು ಮೊರೆಯಿಡಲು ರಕ್ಷಿಸಿದನೆನ್ನಿ
ಅಸುರನರಣ್ಯದೊಳ್ ಭಸ್ಮವ ಮಾಡಲು
ವಸುಧೆಯೊಳ್ ನಾಟ್ಯವನಾಡಿದನೆನ್ನಿ ||
ಬಲಿಯ ಬೇಡಿದನೆನ್ನಿ ಚೆಲುವ ವಾಮನನೆನ್ನಿ
ಲಲನೆಯ ಅಭಿಮಾನ ಕಾಯ್ದನೆನ್ನಿ
ಕಲಿಯುಗದಲಿ ಬಂದ ಕೃಷ್ಣಾವತಾರನೆನ್ನಿ
ಸಲೆ ಪಾಂಡುಸುತರನ್ನು ಪಾಲಿಸಿದನೆನ್ನಿ ||
ಕರುಣಾಕರನೆನ್ನಿ ಕಪಟನಾಟಕನೆನ್ನಿ
ಕರಿರಾಜನನು ಕಾಯ್ದ ಕೃಷ್ಣನೆನ್ನಿ
ಪರಿಪರಿಯಿಂದಲಿ ಭಕ್ತರ ಸಲಹುವ
ವರದ ಪುರಂದರವಿಠಲನೆನ್ನಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments