ಮಾನಹೀನನಿಗಭಿಮಾನವೇಕೆ

ಮಾನಹೀನನಿಗಭಿಮಾನವೇಕೆ

(ರಾಗ ಕಾಂಭೋಜ ಅಟತಾಳ ) ಮಾನಹೀನನಿಗಭಿಮಾನವೇಕೆ ||ಪ || ಜ್ಞಾನವಿಲ್ಲದವಂಗೆ ಗುರುಬೋಧೆಯೇಕೆ ||ಅ || ಕಾಡೊಳಗೆ ತಿರುಗುವಗೆ ಕನಕಭೂಷಣವೇಕೆ ಓಡೊಳೊಗೆ ತಿಂಬುವಗೆ ಹರಿವಾಣವೇಕೆ ಬೇಡಿದರೆ ಕೊಡದಿಹಗೆ ಕಡುಬಿಂಕತನವೇಕೆ ಪಾಡಲರಿಯದವಂಗೆ ಪ್ರೌಢತನವೇಕೆ || ಅಂಬಲಿಯನುಂಬವಗೆ ಅಮೃತಾನ್ನವದೇಕೆ ಕಂಬಳಿಯ ಹೊದೆವವಗೆ ಮಡಿಯೇತಕೆ ಡೊಂಬಾಟಕಿಕ್ಕುವಗೆ ಗಾಂಭೀರ್ಯತನವೇಕೆ ಹಂಬಲವ ಬಿಡದವಗೆ ಹರಿನಾಮವೇಕೆ || ಭೂಸುರರ ಕೊಲುವವಗೆ ಭೂರಿ ಧರ್ಮಗಳೇಕೆ ಭಾಷೆಗೆಟ್ಟವಗೆ ನಂಬುಗೆಯೇತಕೆ ಕ್ಲೇಶ ಒಡಲೊಳಗಿರಲು ತೀರ್ಥಯಾತ್ರೆಗಳೇಕೆ ಆಸೆ ಬಿಡದಿದ್ದವಗೆ ಸನ್ಯಾಸವೇಕೆ || ಮಿತಿಮೀರಿ ನಡೆವವಗೆ ವ್ರತನೇಮಗಳು ಏಕೆ ಸತಿಗೆ ಅಳುಕುವನ ಸಾಹಸವು ಏಕೆ ಮತಿಶುದ್ಧಿಯಿಲ್ಲದ ಮಂತ್ರ ತಂತ್ರಗಳೇಕೆ ಗತಿಯ ಚಿಂತಿಸದವನ ವಿಪ್ರತ್ವವೇಕೆ || ಸಾಮಾನ್ಯನಿಗೆ ಸಾರ್ವಭೌಮ ಪದವಿಯದೇಕೆ ಪ್ರೇಮವಿಲ್ಲದ ಬಂಧುಜನವೇತಕೆ ಸ್ವಾಮಿ ಶ್ರೀ ಪುರಂದರವಿಠಲನ ನೆನೆಯದಿಹ ತಾಮಸಾಧಮನಿಗೆ ಕೈವಲ್ಯವೇಕೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು