ಮಲವ ತೊಳೆಯಬಲ್ಲರಲ್ಲದೆ
(ರಾಗ ಕಾಪಿ. ಏಕ ತಾಳ)
ಮಲವ ತೊಳೆಯಬಲ್ಲರಲ್ಲದೆ ಮನವ ತೊಳೆಯಬಲ್ಲರೆ ||ಪ||
ಹಲವು ತೀರ್ಥಂಗಳಲಿ ಮುಳುಗಿ ಹಲುಬಿದರೆ ಫಲವೇನು ||ಅ.ಪ||
ಭೋಗ ವಿಷಯ ಫಲವನುಂಡು ರಾಗ ಲೋಭದಿಂದ ಮತ್ತ-
ನಾಗಿ ಮೆರೆಯುತಿರೆ ಅವನ ಭಾಗ್ಯವಂತನೆಂಬರೆ
ಯೋಗಿಯಂತೆ ಜನರು ಮೆಚ್ಚೋ ಹಾಗೆ ಹೋಗಿ ನೀರಿನಲ್ಲಿ
ಕಾಗೆಯಂತೆ ಮುಳುಗೆ ಮಾಘಸ್ನಾನ ಫಲವು ಬಾಹೊದೆ ||
ಪರರ ಕೇಡ ಬಯಸಿ ಗುರು ಹರಿಯರನ್ನು ನಿಂದಿಸುತ್ತ
ಪರಮಸೌಖ್ಯವೆಂದು ಪರಸ್ತ್ರೀಯರನ್ನು ಬಯಸುತ
ಪರಮನಿಷ್ಠ ಮೌನಿಯಂತೆ ಧರೆಯ ಮೇಲೆ ಡಂಭ ತೋರಿ
ಹರಿವ ನೀರಿನ ತೀರದಿ ಕುಳಿತರೇನು ಬಕಧ್ಯಾನದಿ ||
ಕಾಸು ವೀಸಕಾಗಿ ಹರಿಯ ದಾಸನೆಂದು ತಿರುಗಿ ತಿರುಗಿ
ದೇಶ ದೇಶಗಳಲಿ ತೊಳಲಿ ಕಾಶಿಯಾತ್ರೆ ಪೋಗಲು
ಆಸೆಪಾಶ ಬಿಡದೆ ಮನಸ ಹೇಸಿ ವಿಷಯ ಬಯಸುವಂಥ
ವೇಷಧಾರಿಗಳಿಗೆ ಕಾಶೀ ಯಾತ್ರೆ ಫಲವು ಬಾಹೊದೆ ||
ತಂದೆ ತಾಯಿ ತಿರಿದು ತಿನಲು ಒಂದು ದಿನ ಕೇಳಲಿಲ್ಲ
ಮಂದಗಮನೆರೊಡನೆ ಆನಂದದಿಂದಲಿರುವರು
ತಂದೆ ಸತ್ತ ಮೇಲೆ ನೂರು ಮಂದಿ ವಿಪ್ರರಿಗುಣಿಸಿ
ತಮ್ಮ ತಂದೆ ತೃಪ್ತನಾದನೆಂಬರು ಮಂದ ಮತಿಯ ಜನಗಳು ||
ಏನು ಓದಲೇನು ಫಲ ಏನು ಕೇಳಲೇನು ಫಲ
ಜ್ಞಾನದಿಂದ ಅಚ್ಯುತನ ಧ್ಯಾನವಿಲ್ಲದವರಿಗೆ
ಮೌನ ನೇಮ ನಿಷ್ಠೆ ಏಕೇ ಹೀನ ಚಿತ್ತನಾದ ಮೇಲೆ
ಶ್ರೀನಿವಾಸ ಪುರಂದರ ವಿಠಲನು ಮೆಚ್ಚುವನೆ ಮರುಳೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments