ಮಲಗಿ ಎದ್ದನು ಕಾಣೆ ಮಕ್ಕಳ ಮಾಣಿಕ ರಂಗ
(ರಾಗ ಸೌರಾಷ್ಟ್ರ ಆದಿ ತಾಳ )
ಮಲಗಿ ಎದ್ದನು ಕಾಣೆ ಮಕ್ಕಳ ಮಾಣಿಕ ರಂಗ, ಎದ್ದ ಕಾಣೆ ಅಮ್ಮ
ಛಲಹೋರಿ ಅಳುತಾನೆ ಮೊಲೆ ಕೊಡೆ ರಂಗಗೆ, ಎದ್ದ ಕಾಣೆ ||ಪ ||
ಧರೆಯೊಳು ತಮನ ಮರ್ದಿಸಲೆಂದು ಮತ್ಸ್ಯನಾ, ಗೆದ್ದ ಕಾಣೆ
ಭರದಿ ಮಂದರ ಪೊತ್ತು ಇಳೆಯೊಳು ಕೂರ್ಮನಾ, ಗೆದ್ದ ಕಾಣೆ
ಧರೆಯ ಕದ್ದಸುರನ್ನ ಕೊಲಲೆಂದು ವರಹನಾ, ಗೆದ್ದ ಕಾಣೆ
ತರಳ ಕರೆಯೆ ಕಂಭದಿಂದ ನರಸಿಂಹನಾ, ಗೆದ್ದ ಕಾಣೆ ||
ಚಿಕ್ಕ ವೇಷದಲಿ ದಾನವ ಬೇಡಿ ವಾಮನಾ, ಗೆದ್ದ ಕಾಣೆ
ಉಕ್ಕಿನ ಕೊಡಲಿಯ ಪಿಡಿದು ಪರಶುರಾಮ, ಎದ್ದ ಕಾಣೆ
ರಕ್ಕಸ ರಾವಣನ ಕೊಲಲೆಂದು ಶ್ರೀ ರಾಮ, ಎದ್ದ ಕಾಣೆ
ಸೊಕ್ಕಿದ ಕಂಸನ್ನ ವಧೆ ಮಾಡೆ ಶ್ರೀ ಕೃಷ್ಣ, ಎದ್ದ ಕಾಣೆ ||
ಪುರದ ಸತಿಯರ ವ್ರತವನಳಿದ ಬುದ್ಧನೆದ್ದ ಕಾಣೆ
ಹರುಷದಿ ತುರಗವನೇರಿದ ಕಲ್ಕ್ಯ ತಾನೆದ್ದ ಕಾಣೆ
ಶರಣಾಗತರನ್ನು ಪಾಲಿಪ ಶ್ರೀಹರಿಯೆದ್ದ ಕಾಣೆ ನಮ್ಮ
ವರದ ಪುರಂದರವಿಠಲ ಕೋಟಿಸೂರ್ಯನೆದ್ದ ಕಾಣೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments