ಮರೆಯದಿರು ಶ್ರೀಹರಿಯ
(ರಾಗ ಉದಯರಾಗ ಝಂಪೆ ತಾಳ )
ಮರೆಯದಿರು ಶ್ರೀಹರಿಯ ||ಪ||
ಮರೆಯದಿರು ಶ್ರೀಹರಿಯ ಮರಣಾತುರದಿ ಮಗನ
ಕರೆದವಗೆ ಸಾಲೋಕ್ಯವಿತ್ತ ನಾರಾಯಣನ
ಸ್ಮರಣೆಯನು ಮಾಡುವರ ಚರಣಸೇವಕರಿಗೆ
ನೆರೆ ಸಾಯುಜ್ಯಪದವೀವನಯ್ಯ ಅಯ್ಯ ||
ದೇವಕಿಯ ಬಂಧವನ ಪರಿಹರಿಸಿದವನ ಪೂ-
ತನಿಯ ಜೀವವ ಮಡುಹಿದವನ, ಮಾವನ ಕೊಂದವನ
ಪಾವನಿ ತರಂಗಿಣಿಯ ಪದನಖದಿ ಪಡೆದವನ ಗೋವರ್ಧನೋದ್ಧಾರನ
ದಾವಾನಲವ ಪಿಡಿದು ನುಂಗಿದನ ಲೀಲೆಯಿಂ
ಗೋವತ್ಸ ರೂಪನಾಗಿ ಸನಕಾದಿ
ದೇವಮುನಿ ಮುಖರಾರಾಧಿಪನ ಚರಣರಾಜೀವವಂ ಭಜಿಸು ಕಂಡ್ಯ ಮನವೆ ||
ಕಂಜಸಂಭವಪಿತನ ಕರುಣಾಪಯೋನಿಧಿಯ
ಕುಂಜರನ ನುಡಿ ಕೇಳಿ ಒದಗಿ ರಣದೊಳ್ ಧ-
ನಂಜಯನ ಜೀವವಂ ಕೃಪೆಯಿಂದ ಕಾಯ್ದವನ ಆಂಜನೇಯನಾಳ್ದನ
ರಂಜಿಸುವ ಕೌಸ್ತುಭ ಭೂಷಣನ
ನಂಜಿನೊಡೆಯನ ಮೇಲೆ ಮಲಗಿ ತಮದೋಳ್ ಪ-
ರಂಜ್ಯೋತಿಮಯನಾಗಿ ಬೆಳಗುವನ ಚರಣಕಂಜವಂ ಭಜಿಸು ಕಂಡ್ಯ ಮನವೆ ||
ವಾರಿಧಿಯೊಳಾಡ್ದವನ ವರಗಿರಿಯ ತಾಳ್ದವನ
ಧಾರಿಣಿಯ ತಂದವನ ದೈತ್ಯನಂ ಕೊಂದವನ
ಮೂರಡಿಯನಳೆದವನ ಮರಗೊಡಲಿಯ ಸೆಳೆದವನ ವಾರಿಧಿಯ ಬಂಧಿಸಿದನ
ದ್ವಾರಕೆಯನಾಳ್ದವನ ಪುರಮೂರು ಜಯಿಸಿದನ
ಚಾರು ಹಯವೇರಿದನ ಸರಯುತೀರದ ರಾಮ
ಪುರಂದರವಿಠಲನ ಚರಣವಂ ಭಜಿಸು ಕಂಡ್ಯ ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments