ಮರುಳಾಟವೇಕೋ ಮನುಜ
(ರಾಗ ಯದುಕುಲಕಾಂಭೋಜಿ. ಆದಿ ತಾಳ)
ಮರುಳಾಟವೇಕೋ ಮನುಜ ಕೂಗಾಟವೇಕೋ
ಸರುವ ದುರ್ಗುಣಂಗಳನ್ನು ಶರೀರದಿ ಬಚ್ಚಿಟ್ಟುಕೊಂಡು ||ಪ||
ಮೃತ್ತಿಕೆ ಶೌಚ ಮಾಡದವಗೆ ಮತ್ತೆ ಸ್ನಾನ ಮಂತ್ರವೇಕೆ
ಹೊತ್ತು ಕಟ್ಟಾದವಗೆ ಅಗ್ನಿಹೋತ್ರವೇತಕೆ
ತೊತ್ತು ಬಡಕನಿಗೆ ಪರತತ್ವದ ವಿಚಾರವೇಕೆ
ಕರ್ತು ಕೃಷ್ಣನ ನೆನೆಯದವನ ಉತ್ತಮಗುಣವೇತಕೆ ||
ಮೂಲ ಮಂತ್ರವಿಲ್ಲದವಗೆ ಮೇಲೆ ದೇವತಾರ್ಚನೆಯೇಕೆ
ಸಾಲಿಗ್ರಾಮಾಭಿಷೇಕವಿಲ್ಲದ ತೀರ್ಥವೇತಕೆ
ಸೂಳೆಯಗಾರಗೆ ತುಳಸಿಮಾಲೆಯ ಶೃಂಗಾರವೇಕೆ
ಮಾಲೋಲನ್ನ ನೆನೆಯದವನ ನಾಲಿಗೆಯೇತಕೆ ||
ಹಸಿವು ತೃಷೆಯ ಸಹಿಸದವಗೆ ಹುಸಿಯಾದ ವೈರಾಗ್ಯವೇಕೆ
ವಿಷಯ ಮೆಚ್ಚಿದವಗೆ ಪರರ ಕುಶಲವೇತಕೆ
ಪುಸಿಯಾದ ಜಪ ಮಾಡುವವಗೆ ಮುಸುಕಿನ ಡಂಭವದೇಕೆ
ಪಿಸಜನಾಭನಿಗರ್ಪಿಸಿದ ಅಶನವೇತಕೆ ||
ಊರ್ಧ್ವಪುಂಡ್ರ ಹಚ್ಚದವನ ಮುಖವ ತಿದ್ದಿ ನೋಡುವದೇಕೆ
ಶುದ್ಧ ಸಾತ್ವಿಕಗೆ ಪರರ ಬುದ್ಧಿಯೇತಕೆ
ಕದ್ದು ಹೊಟ್ಟೆ ಪೊರೆಯುವವಗೆ ಶುದ್ಧ ಶೀಲ ವೃತ್ತಿಯೇಕೆ
ಮಧ್ವ ಮತವ ಹೊಂದದವನ ಪದ್ಧತಿಯೇತಕೆ ||
ಕಂಡ ನಾರಿಗಿಚ್ಛೈಸುವ ಲಂಡಗೆ ಪುರಾಣವೇಕೆ
ಬಂಡು ಮಾತಿನ ಕವಿಯ ಬಹು ಪಾಂಡಿತ್ಯವೇತಕೆ
ಪುಂಡರೀಕಾಕ್ಷ ನಮ್ಮ ಶ್ರೀ ಪುರಂದರವಿಠಲನ್ನ
ಕಂಡು ಕಂಡು ಭಜಿಸದವಗೆ ಉದ್ದಂಡವೇತಕೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments