ಮನೆಯೊಳಗಾಡೋ ಗೋವಿಂದ
(ರಾಗ ಕಾಮವರ್ಧನಿ/ಪಂತುವರಾಳಿ ಅಟತಾಳ )
ಮನೆಯೊಳಗಾಡೋ ಗೋವಿಂದ, ನೆರೆ-
ಮನೆಗಳಿಗೇಕೆ ಪೋಗುವೆಯೋ ಮುಕುಂದ ||ಪ||
ನೊಸಲಿಗೆ ತಿಲಕವನಿಡುವೆ, ಅಚ್ಚ
ಹೊಸ ಬೆಣ್ಣೆಯನಿಕ್ಕಿ ಕಜ್ಜಾಯ ಕೊಡುವೆ
ಹೊಸ ಆಭರಣಗಳನಿಡುವೆ, ಮುದ್ದು
ಹಸುಳೆ ನಿನ್ನನು ನೋಡಿ ಸಂತೋಷಪಡುವೆ ||
ಅಣ್ಣಯ್ಯ ಬಲರಾಮಸಹಿತ, ನೀ-
ನಲ್ಲಲ್ಲಿ ತಿರುಗಾಡುವುದೇನು ವಿಹಿತ
ಹೆಣ್ಣುಗಳೇಕೋ ಸಂಗಾತ, ಎನ್ನ
ಬಿನ್ನಪವನು ಪರಿಪಾಲಿಸೊ ದಾತ ||
ಚೋರನೆನಿಸಿಕೊಳಲೇಕೋ, ಲಕ್ಷ್ಮೀ-
ನಾರಾಯಣನೆಂಬ ಬಿರುದು ನಿನಗೇಕೋ
ವಾರಿಜಾಕ್ಷರ ಕೂಟ ಸಾಕೋ, ನಮ್ಮ
ಪುರಂದರವಿಠಲ ನೀ ಮನೆಯೊಳಿರಬೇಕು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments