ಮನವೆ ಚಂಚಲಮತಿಯ ಬಿಡು
(ರಾಗ ಮಧ್ಯಮಾವತಿ )
ಮನವೆ ಚಂಚಲಮತಿಯ ಬಿಡು ||ಪ||
ನಮ್ಮ , ವನಜನಾಭನ ಭಜನೆಯ ಮಾಡು ||ಅ||
ಬಡಮನುಜಗೆ ಬಾಯಬಿಡುತ ದೈನ್ಯದಲವನ
ಅಡಿಗಲಿಗೆರಗಲು ಪಡೆವುದೇನೊ
ಕಡಲಶಯನ ಜಗದೊಡೆಯನ ನೆನೆಯೆ ಕೈ-
ಪಿಡಿದು ಸಲಹುವನು ಬಿಡದಲೆ ಅನುಗಾಲ ||
ಬಲ್ಲಿದ ಭಜಕರ ಬಲ್ಲವ, ಬಲುಸಿರಿ-
ಯುಳ್ಳನು, ಕರುಣಿಯು ನಲ್ಲನಿರೆ
ಕ್ಷುಲ್ಲಕರನು ಕಾಯೆ ಸಲ್ಲದೆಂದೆಂದಿಗು
ನಿಲ್ಲು ಹರಿಯ ಪಾದದಲ್ಲಿ ತಲ್ಲಣಿಸದೆ ||
ಮುಗಿಲು ಮೇಲೆಗಡೆ ಅಗಣಿತ ಆಪ-
ತ್ತುಗಳು ಬಂದಡರಲು ನಗುತಲಿರು
ಜಗದುದರನ ಮಹಿಮೆಗೆ ನಮೋ ನಮೋ ಎಂದು
ಪೊಗಳುತ್ತ ಬಾಳಘಗಳನು ಗಣಿಸದಲೆ ||
ಆವಾವ ಕಾಲಕ್ಕೆ ದೇವನಿಚ್ಛೆಯಿಂದ
ಆವಾವುದು ಬರೆ ಸುಖವೆನ್ನು
ಶ್ರೀವರ ಅನಾದಿ ಜೀವರ ಕ್ಲ್ ಪ್ತದಂತೆ
ಈವನು ನಿಜಸ್ವಭಾವ ಬಿಡದೆ ನಿತ್ಯ ||
ಕೇಶವಾಚ್ಯುತ ಶ್ರೀನಿವಾಸ ಮುರಾರೇ
ದೋಷರಹಿತ ಕ್ಲೇಷನಾಶಕನೆಂದು
ಮೋಸಗೊಳಿಪ ಭವಪಾಶವ ಖಂಡಿಪ
ಶ್ರೀಶ ಪುರಂದರವಿಠಲನು ಜಗಕಿರೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments