ಮನವೆನ್ನ ಮಾತ ಕೇಳದು ಮಂದಜ್ಞಾನದಿ
(ರಾಗ ಶಂಕರಾಭರಣ ಅಟತಾಳ )
ಮನವೆನ್ನ ಮಾತ ಕೇಳದು ಮಂದಜ್ಞಾನದಿ
ತನುವಿನಾಸೆಯು ಬಿಡಲೊಲ್ಲದು ||ಪ ||
ದೇಹಸಂಬಂಧಿಗಳಾದವರೈವರು
ಮೋಹಪಾಶದಿ ಕಟ್ಟಿ ಬಿಗಿದಿಹರೈ
ದೇಹವನಿತ್ಯವೆಂಬುದ ಗುರುತರಿಯದೆ
ಮಾಯ ಪ್ರಪಂಚವೆಂಬುದು ಬದ್ಧವಾಗಿದೆ ||
ಸಾಧುಸಜ್ಜನರ ಸಂಗವ ಮಾಡಿ ಪರಗತಿಗೆ
ಆಧಾರವನು ಮಾಡಲೊಲ್ಲದಯ್ಯ
ಕ್ರೋಧಕುಹಕ ದುಷ್ಟರೊಡನಾಡಿ ಕಾಲನ
ಬಾಧೆಗೆ ಗುರಿಯ ಮಾಡುತಲಿದೆ ಹರಿಯೆ ||
ಮದಗಜ ಮೈಯ ಮರೆದು ಮುಂದುಗಾಣದೆ
ಕದುವಿಳೊಳಗೆ ಬಿದ್ದಂತಾಯಿತಯ್ಯ
ಹೃದಯಕಮಲದಲ್ಲಿ ನಿಂತು ರಕ್ಷಿಸೊ ಎನ್ನ
ಪದುಮಾಕ್ಷವರದ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments