ಮಂದಗಮನೆ ಇವನಾರೆ ಪೇಳಮ್ಮ

ಮಂದಗಮನೆ ಇವನಾರೆ ಪೇಳಮ್ಮ

(ರಾಗ ಮೋಹನ. ಅಟ ತಾಳ )

 

ಮಂದಗಮನೆ ಇವನಾರೆ ಪೇಳಮ್ಮ

ಮಂದರಧರ ಗೋವಿಂದ ಕಾಣಮ್ಮ ||ಪ||

 

ಕೆಂದಳಿರು ನಖ ಶಶಿಬಿಂಬ ಪದಪದ್ಮ

ಅಂದುಗೆ ಇಟ್ಟವನಾರೆ ಪೇಳಮ್ಮ

ಅಂದು ಕಾಳಿಂಗನ ಪೆಡೆಯ ತುಳಿದ ದಿಟ್ಟ

ನಂದನ ಕಂದ ಮುಕುಂದ ಕಾಣಮ್ಮ ||

 

ಉಡುಗೆ ಪೀತಾಂಬರ ನಡುಗೆ ಹೊನ್ನುಡುದಾರ

ಕಡಗ ಕಂಕಣವಿಟ್ಟವನಾರಮ್ಮ

ಮಡದಿ ಕೇಳ್ ಸಕಲ ಲೋಕಂಗಳ ಕುಕ್ಷಿಯೊ-

ಳೊಡನೆ ತೋರಿದ ಜಗದೊಡೆಯ ಕಾಣಮ್ಮ ||

 

ನೀರದನೀಲದಂತೆಸವ ವಕ್ಷದಿ ಕೇ-

ಯೂರಹಾರವನಿಟ್ಟವನಾರಮ್ಮ

ನೀರೆ ಕೇಳು ನಿರ್ಜರರಾದವರಿಗೆ

ಪ್ರೇರಿಸಿ ಫಲವಿತ್ತುದಾರಿ ಕಾಣಮ್ಮ ||

 

ಶಂಖಚಕ್ರವು ಗದೆ ಪದ್ಮ ಕೈಯೊಳಗಿಟ್ಟ-

ಲಂಕರಿಸುವನೀತನಾರಮ್ಮ

ಪಂಕಜಮುಖಿ ಶ್ರೀಭೂದೇವಿಯರರಸನು

ಶಂಕೆಯಿಲ್ಲದೆ ಗೋಪಿತನಯ ಕಾಣಮ್ಮ ||

 

ಕಂಬುಕಂಧರ ಕರ್ಣಾಲಂಬಿತಕುಂಡಲ

ಅಂಬುಜ ಮುಖದವನಾರೆ ಹೇಳಮ್ಮ

ರಂಭೆ ಕೇಳೀತ ಪುರಂದರವಿಠಲ

ನಂಬಿದ ಭಕ್ತಕುಟುಂಬಿ ಕಾಣಮ್ಮ ||

ದಾಸ ಸಾಹಿತ್ಯ ಪ್ರಕಾರ
ಬರೆದವರು