ಮಂಗಳಾಂಗ ಮನ್ನಿಸಿ ತಪ್ಪನು

ಮಂಗಳಾಂಗ ಮನ್ನಿಸಿ ತಪ್ಪನು

(ರಾಗ ನೀಲಾಂಬರಿ ಮಟ್ಟ ತಾಳ ) ಮಂಗಳಾಂಗ ಮನ್ನಿಸಿ ತಪ್ಪನು ರಂಗನಾಥ ರಕ್ಷಿಸೈ ತಂದೆ ಎನ್ನನು ||ಪ|| ಮಮತೆ ಇಲ್ಲದ ಮಡದಿ ಏತಕೆ, ರಂಗನಾಥ ಸುಮತಿ ಇಲ್ಲದ ಸುತನು ಏತಕೆ ಕುಮತಿಯುತರ ಸಂಗವೇಕೆ, ಸಮತೆಯಿಲ್ಲದ ಬಂಧುವೇಕೆ ಅಮಿತ ನಿನ್ನ ಚರಣಕಮಲ ರಮಿತನಾಗದ ಮನುಜನೇಕೆ ||೧|| ಕಣ್ಣು ಇಲ್ಲದ ರೂಪ ಏತಕೆ, ರಂಗನಾಥ ಹೊನ್ನು ಇಲ್ಲದ ಬಾಳು ಏತಕೆ ಮುನ್ನ ಮೂಗು ಇಲ್ಲದ ಮುಖವು ಮಣ್ಣು ತಿಂದು ಹೋದರೇನು ಅಣ್ಣ ನಿನ್ನ ಭಕುತಿ ಇಲ್ಲದ ಸಣ್ಣ ಮನುಜ ಸತ್ತರೇನು ||೨|| ದಾನವಿಲ್ಲದ ಧನವು ಏತಕೆ, ರಂಗನಾಥ ಜ್ಞಾನವಿಲ್ಲದ ವಿದ್ಯೆ ಏತಕೆ ಆಣೆ ಇಲ್ಲದ ಅರಸು ತಾನು ಅಡವಿಪಾಲು ಆದರೇನು ದೀನ ಬಂಧು ನಿನ್ನ ನಂಬದ ಮಾನಹೀನ ಮನುಜನೇತಕೆ ||೩|| ಮಕ್ಕಳಿಲ್ಲದ ಮನೆಯು ಏತಕೆ, ರಂಗನಾಥ ಅಕ್ಕರೆಯಿಲ್ಲದ ಊಟವೇತಕೆ ಸೊಕ್ಕಿ ನಡೆವ ಬಂಟನೇತಕೆ ಮಿಕ್ಕುಮೀರ್ವ ಶಿಷ್ಯನೇತಕೆ ರಕ್ಕಸಾರಿ ನಿನ್ನ ಸೇರದ ಸೊಕ್ಕುನರನ ಜನ್ಮವೇತಕೆ ||೪|| ಸಾಕು ಸಾಕು ದೀನನಾದೆನು, ರಂಗನಾಥ ಸಾಕು ಸಾಕೈ ಬೇಗ ಎನ್ನನು ಕಾಕು ಮಾಡಿ ವೈಕುಂಠದ ನಗರದೊಡೆಯ ನಾರಸಿಂಹ ಏಕ ಭಕ್ತಿಯಿಂದಲಿರುವನ ಏಕೆ ಕೈಯ ಬಿಡುವೆ ದೊರೆಯೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು