ಭಳಿ ಭಳಿರೆ ಎನ್ನ ಸುಖವೆಂಬುದೇ ಸುಖವು
(ರಾಗ ನಾಟಿ ಝಂಪೆತಾಳ)
ಭಳಿ ಭಳಿರೆ ಎನ್ನ ಸುಖವೆಂಬುದೇ ಸುಖವು
ಕಲಿಕಾಲಕಿದಕಿರಲೊ ಕಾವೇರಿ ರಂಗನೆ ||ಪ||
ತಂದೆ ನೀನೆ ಕೃಷ್ಣ, ತಾಯಿ ಇಂದಿರಾದೇವಿ
ಮಂದಜಾಸನ ಎನಗೆ ಹಿರಿಯಣ್ಣನು
ಇಂದುಮುಖಿ ಶ್ರೀಸರಸ್ವತಿದೇವಿಯತ್ತಿಗೆಯು
ಎಂದೆಂದಿಗೂ ವಾಯುದೇವರೇ ಗುರುವು ||
ಗುರುಪತ್ನಿ ಶ್ರೀಭಾರತಿಯು ನೋಡೆ ಮೇಲಾಗಿ
ಗರುಡಾಹಿ(ಗರುಡಾದಿ?) ರುದ್ರರಣ್ಣನ ಮಕ್ಕಳು
ಸುರರು ಸನಕಾದಿಗಳು ಪರಮ ಬಾಂಧವರೆನಗೆ
ಸ್ಥಿರವಾದ ವೈಕುಂಠವೆನಗೆ ಮಂದಿರವು ||
ನಿನ್ನ ಪಾದಾಂಬುರುಹ ಭಜಿಸುವುದೆ ಸೌಭಾಗ್ಯ
ನಿನ್ನ ನಿರ್ಮಾಲ್ಯಗಳೆ ಭೋಗದ್ರವ್ಯ
ನಿನ್ನ ಕಥೆ ಕೇಳುವುದೆ ಮಂಗಳ ಸುವಾದ್ಯಗಳು
ನಿನ್ನಂಥ ಅರಸೆನಗೆ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments