ಭಯನಿವಾರಣವು ಶ್ರೀಹರಿಯ ನಾಮ (ಉದಯರಾಗ)
ಭಯನಿವಾರಣವು ಶ್ರೀಹರಿಯ ನಾಮ
ಜಯಪಾಂಡುರಂಗ ವಿಟ್ಠಲ ನಿಮ್ಮ ನಾಮ
ಧಾರಿಣೀ ದೇವಿಗಾಧಾರವಾಗಿಹ ನಾಮ
ನಾರದರು ನಲಿನಲಿದು ನೆನೆವ ನಾಮ ||
ಘೋರ ಪಾತಕಿ ಅಜಾಮಿಳನ ಸಲಹಿದ ನಾಮ
ತಾರಕವು ಬ್ರಹ್ಮಭವರಿಗೆ ನಿಮ್ಮ ನಾಮ
ಮೊರೆಯ ಲಾಲಿಸಿ ಮುನ್ನ ಗಜನ ಸಲುಹಿದ ನಾಮ
ತರುಣಿ ದ್ರೌಪದಿಮಾನ ಕಾಯ್ದ ನಾಮ ||
ಮರುಗುತಿಹ ಧ್ರುವನಿಗೆ ಸ್ಥಿರಲೋಕವಿತ್ತಾ ನಾಮ
ಪರಕೆ ಪರತತ್ವವಲ್ಲವೆ ನಿಮ್ಮ ನಾಮ
ಚರಣದಿಂದಹಲ್ಯೆಯ ಸೆರೆಯ ಬಿಡಿಸಿದ ನಾಮ
ಕರುಣದಿಂ ಪ್ರಹ್ಲಾದಗೊಲಿದ ನಾಮ ||
ಕರೆಯ ಬಂದಕ್ರೂರಗೆ ನಿಜವ ತೋರಿದ ನಾಮ
ಸ್ಮರಿಪ ಭಕುತರಿಗೆ ಸಮಸ್ತವೀವ ನಾಮ
ಚಂದ್ರಶೇಖರ ಗಿರಿಜೆಗುಪದೇಶಿಸಿದ ನಾಮ
ಬಂದ ವಿಭೀಷಣಗಭಯವಿತ್ತ ನಾಮ ||
ಅಂದು ಮುಚಕುಂದಗೆ ಕಾಮಿತವಿತ್ತ ನಾಮ
ಪಾಂಡವ ಪಕ್ಷ ಪಾವನ ಕೃಷ್ಣ ನಾಮ
ಅಖಿಳ ವೇದಪುರಾಣ ಅರಸಿ ಕಾಣದ ನಾಮ
ಸಕಲ ಯೋಗಿಜನರು ನೆನೆವ ನಾಮ ||
ಮುಕುತಜನ ಹೃತ್ಕಮಲದಲಿ ನೆಲೆಸಿಹ ನಾಮ
ರುಕ್ಮಿಣೀಯರಸ ವಿಟ್ಠಲ ನಿಮ್ಮ ನಾಮ
ಭಕುತಿಯಲಿ ನೆನೆವರನು ಎತ್ತಿ ಸಲಹುವ ನಾಮ
ಮುಕುತಿಗೆ ಸೋಪಾನ ಶ್ರೀರಾಮನಾಮ ||
ಶಕುತಿಹೀನರಿಗೆ ಸಂಪತ್ತಾದ ನಾಮ
ಕಂದರ್ಪನನು ಪೆತ್ತ ಶ್ರೀಪತಿ ನಿಮ್ಮ ನಾಮ
ಕಡವಾಲದ ಮರವೇರಿ ಮಡುವ ಧುಮುಕಿದ ನಾಮ
ಹೆಡೆಯ ಕಾಳಿಂಗನಾ ತುಳಿದ ನಾಮ ||
ಮಡದಿಯರ ಸ್ತುತಿ ಕೇಳಿ ವರವಿತ್ತ ನಾಮ
ಗರುಡವಾಹನ ಶ್ರೀಕೃಷ್ಣ ನಿಮ್ಮ ನಾಮ
ವಾರಾಂಗನೆಗೆ ಒಲಿದು ವಶವಾದ ನಾಮ
ಕಾವೇರಿ ರಂಗನೆಂದು ಮೆರೆವ ನಾಮ ||
ಕ್ಶೀರಶಾಗರದಲ್ಲಿ ಶಯನವಾಗಿಹ ನಾಮ
ನಾರಾಯಣನೆ ನರಕ ಬಿಡಿಸಿದ ನಾಮ
ನಂಬಿದಾ ಭಕುತರನು ಬಂದು ಸಲಹುವ ನಾಮ
ಹಂಬಲದಿ ಅಮೃತವನ್ನೆರೆದ ನಾಮ ||
ಅಂಬರೀಷನ ಶಾಪ ಬಿಡಿಸಿ ಸಲಹಿದ ನಾಮ
ಶಂಭುಪ್ರಿಯ ಪುರಂದರವಿಠಲ ನಿಮ್ಮ ನಾಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments