ಭಯನಿವಾರಣವು ಶ್ರೀಗುರು ದಿವ್ಯನಾಮ ನಿಮ್ಮ ನಾಮ

ಭಯನಿವಾರಣವು ಶ್ರೀಗುರು ದಿವ್ಯನಾಮ ನಿಮ್ಮ ನಾಮ

(ಬಾಗೇಶ್ರೀ ರಾಗ ಝಪ್ ತಾಳ) ಭಯನಿವಾರಣವು ಶ್ರೀಗುರು ದಿವ್ಯನಾಮ ನಿಮ್ಮ ನಾಮ ||ಪ|| ಕ್ಲೇಶಪಾಶವ ಕತ್ತರಿಸಿ ದೋಷನಾಶವನು ಗೈಸಿ ಮೋಕ್ಷಿಸುವ ಕೇಶವ ನಿಮ್ಮ ನಾಮ ||೧|| ನರಕ ಘೋರದ ಘಟವೆಂಬ ನರಜನ್ಮದುರ್ಘಟ ತಾರಿಸುವ ನಾರಾಯಣ ನಿಮ್ಮ ನಾಮ ||೨|| ಮದ ಮತ್ಸರವ ಜರಿಸಿ ಭೇದಾಭೇದವ ಹರಿಸಿ ಸದ್ಗೈಸುತಿಹ ಮಾಧವ ನಿಮ್ಮ ನಾಮ ||೩|| ಗೋವಿಸಿಹ ವಿದ್ಯದ ಮಾಯಾ ಮೋಹವನಳಿಸಿ ಭವ ಹಿಂಗಿಸುವ ಗೋವಿಂದ ನಿಮ್ಮ ನಾಮ ||೪|| ಇಷ್ಟಾರ್ಥಗಳ ಕೊಟ್ಟು ಕಷ್ಟಾರ್ಥ ಪರಿಹರಿಸಿ ದೃಷ್ಟಾಂತದಲಿ ಹೊರೆವ ವಿಷ್ಣು ನಿಮ್ಮ ನಾಮ ||೫|| ಮೊದಲು ಮೂವಿಧಿಗಳ ಜರಿಸಿ ಸದಮಲ ಪುಣ್ಯ- ಪದವೀವ ಮಧುಸೂಧನ ನಿಮ್ಮ ನಾಮ ||೬|| ತ್ರಿವಿಧಾಧ್ಯಾತ್ಮ ಸ್ಥಿತಿಗತಿಯ ಈವ ಶಾಸ್ತ್ರಗಳನರಿಸಿ ಭಾವಭಕ್ತಿ ಈವ ತ್ರಿವಿಕ್ರಮ ನಿಮ್ಮ ನಾಮ ||೭|| ಮರ್ಮಧರ್ಮವನರಿಸಿ ಕರ್ಮಪಾಶವ ಹರಿಸಿ ಜನ್ಮ ತಾರಿಸುವ ವಾಮನ ನಿಮ್ಮ ನಾಮ ||೮|| ಶ್ರೀಕರವನಿತ್ತು ಸಿರಿಸಕಲ ಸೌಭಾಗ್ಯದಲಿ ಸೃಷ್ಟಿಯೊಳು ಹೊರೆವ ಶ್ರೀಧರ ನಿಮ್ಮ ನಾಮ ||೯|| ಹರಿಸಿ ಸಂದೇಹ ಸಂಕಲ್ಪ ಬಾಧೆಗಳ ಹರುಷ ಗತಿವೀವ ಹೃಷಿಕೇಶ ನಿಮ್ಮ ನಾಮ ||೧೦|| ಪರಬ್ರಹ್ಮದೊಳು ಬೆರೆಸಿ ಪರಮಪಾತಕ ಹರಿಸಿ ಪರಮಗತಿಯೀವ ಪದ್ಮನಾಭ ನಿಮ್ಮ ನಾಮ ||೧೧|| ದಾರಿದ್ರ್ಯದುರಿತ ವಿಧ್ವಂಸನೆಯ ಮಾಡಿ ಧರೆಯೊಳು- ದ್ಧರಿಸುವ ದಾಮೋದರ ನಿಮ್ಮ ನಾಮ ||೧೨|| ಸಕಲ ಪದವಿತ್ತ ಸುಖಸಾಧನವ ತೋರುತಿಹ ಅಖಿಳದೊಳು ಸಂಕರುಷಣ ನಿಮ್ಮ ನಾಮ ||೧೩|| ವಾಸನೆಯ ಪೂರಿಸುತ ಭಾಷೆ ಪಾಲಿಸುತಿಹ ಲೇಸಾಗೆ ಶ್ರೀವಾಸುದೇವ ನಿಮ್ಮ ನಾಮ ||೧೪|| ಪ್ರಾಣಪ್ರಿಯವಾಗಿ ಪ್ರಸನ್ನವಾಗುವ ಪೂರ್ಣ ಪ್ರತ್ಯಕ್ಷವಿದು ಪ್ರದ್ಯುಮ್ನ ನಿಮ್ಮ ನಾಮ ||೧೫|| ಅವಮಾನ ಪರಿಹರಿಸಿ ಅನುಭವಾಮೃತ ಸುರಿಸಿ ಅನುಕೂಲಾಗುವ ಅನಿರುದ್ಧ ನಿಮ್ಮ ನಾಮ ||೧೬|| ಪೂರ್ವಕರ್ಮವ ಹರಿಸಿ ಪೂರ್ಣಕಳೆಯೊಳು ಬೆರೆಸಿ ಪುಣ್ಯಪದವೀವ ಪುರುಷೋತ್ತಮ ನಿಮ್ಮ ನಾಮ ||೧೭|| ಅಧ್ಯಾತ್ಮ ಸುಖವರಿಸಿ ಸಿದ್ಧಾಂತವನು ತೋರಿ ಅಧ್ಯಕ್ಷವಾಗುವಾಧೋಕ್ಷಜ ನಿಮ್ಮ ನಾಮ ||೧೮|| ನರಜನ್ಮವನು ಹರಿಸಿ ಹರಿಭಕ್ತಿಯೊಳು ಬೆರೆಸಿ ಅರುವು ಕುರುವ್ಹಿದ ನರಸಿಂಹ ನಿಮ್ಮ ನಾಮ ||೧೯|| ಅರ್ಚನೆಯ ಪ್ರಾರ್ಥನೆಯು ಪರಮಪೂಜೆಯನರಸಿ ಅಚಲಪದವೀವ ಅಚ್ಯುತ ನಿಮ್ಮ ನಾಮ ||೨೦|| ಜನನ ಮರಣವನಳಿಸಿ ತನುಮನದೊಳು ಬೆರಿಸಿ ಜನುಮ ಹರಿಸುವ ಜನಾರ್ಧನ ನಿಮ್ಮ ನಾಮ ||೨೧|| ಉಪಮೆಯ ರಹಿತ ವಸ್ತುವುಪಾಯದಲಿ ತೋರಿ ಕೃಪೆಯಿಂದ ಹೊರೆವ ಉಪೇಂದ್ರ ನಿಮ್ಮ ನಾಮ ||೨೨|| ಹರಿಸಿ ಅಹಂಭಾವ ಆರಿಸಿ ಅನುಭವ ಪೂರ್ಣ ಸುರಿಸುವ ಸುಖ ಶ್ರೀಹರಿ ನಿಮ್ಮ ನಾಮ ||೨೩|| ಕರಕಮಲವಿಟ್ಟು ಶಿರದಲಿ ಸದ್ಗೈಸುತಿಹ ಕರುಣಾಳು ಮೂರುತಿ ಶ್ರೀಕೃಷ್ಣ ನಿಮ್ಮ ನಾಮ ||||೨೪|| ವೇದವಿಂಶತಿ ಸಾರ ಸಂಧ್ಯಾಯನದಿ ಮಹಿಪತಿಯ ಹೊರೆವ ಶ್ರೀಗುರು ನಿಮ್ಮ ನಾಮ || ೨೫||
ದಾಸ ಸಾಹಿತ್ಯ ಪ್ರಕಾರ
ಬರೆದವರು