ಬೇಡ ಮನವೆ ಬೇಡಿಕೊಂಬೆನೊ ನಾನು
( ರಾಗ ಕಾಂಭೋಜ. ಆದಿ ತಾಳ)
ಬೇಡ ಮನವೆ ಬೇಡಿಕೊಂಬೆನೊ ನಾನು
ಕಾಡದಿರು ಕಪಟದಿ ಮನವೆ ||ಪ||
ಮಾಡದಿರು ಮತ್ಸರವ ಪರರಿಗೆ ತನ್ನವರಿಗೆ
ಕೇಡನೆಣಿಸಲು ಬೇಡ ಮನವೆ ||ಅ||
ಸಿಟ್ಟಿನಿಂದೊಬ್ಬರನು ಕೆಟ್ಟನುಡಿಯಲು ಬೇಡ
ನಿಟ್ಟು ಮುನಿವರು ಕೇಳು ಮನವೆ
ಕೊಟ್ಟ ಸಾಲವನು ನೀ ಕೊಡದೆ ಬಾಯ್ಬಡೆದರೆ
ಕಷ್ಟ ತಪ್ಪದು ಕೇಳು ಮನವೆ ||
ಸರಿಯಲ್ಲದವರೊಡನೆ ಸಮನಾಗಿ ಕಾದಿದರೆ
ಹಿರಿಯತನ ಕೆಡುವುದೈ ಮನವೆ
ನೆರೆ ನಂಬಿದವರ ದೊಡ್ಡವರ ಮಾಡಿದರೆ
ಹಿರಿಯತನ ಅದರಿಂದ ಮನವೆ ||
ಚಾಡಿಯನು ಹೇಳಿ ದಂಡವನು ತೆರಿಸಿದಾತಗೆ
ನಾಡೆಲ್ಲ ಹಗೆ ಕೇಳು ಮನವೆ
ಕೂಡಿದ್ದ ಗೆಳೆತನವನಗಲಿಸಿದವನಿಗೆ
ಕೇಡು ತಪ್ಪದು ಕೇಳು ಮನವೆ ||
ಹೆಂಡತಿಯ ಪರರಲ್ಲಿ ಬಿಡುವುದು ಬಹು ಲಜ್ಜೆ
ಭಂಡನೆನುವರು ಕೇಳು ಮನವೆ
ಉಂಡ ಮನೆಗೆರಡನ್ನು ಬಗೆದವನ ಸಂಗ
ಬೇಡೆಂದೆಂದಿಗೂ ಕೇಳು ಮನವೆ ||
ವಂದನೆಯ ಮಾಡಿ ಗುರು ಹರಿಯರ ಪಾದಗಳ
ಕಂಡು ನೀ ಶುಚಿಯಾಗು ಮನವೆ
ತಂದೆ ಪುರಂದರವಿಠಲನ್ನ ಪಾದವ
ಪೊಂದಿ ನೀ ಸುಖಿಯಾಗು ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments