ಬೇಡ ಪರಸತಿಸ್ನೇಹ
( ರಾಗ ಮೋಹನ. ಝಂಪೆ ತಾಳ)
ಬೇಡ ಪರಸತಿಸ್ನೇಹ, ಭ್ರಷ್ಟನಾದ್ಯೋ ಮನುಜ
ನೋಡಿಕೋ ನೊಂದವರನು ||ಪ||
ಧರಣಿಯೊಳಗೆ ಜಲಂಧರನು ಗೌರೀಗಣಿಕಿ
ಹರನಿಂದ ಹತನಾದನು
ಮೂರು ಲೋಕವ ಗೆದ್ದ ಮೂಢ ರಾವಣ ಬಿದ್ದ
ಹೀನ ಕೀಚಕನು ಕೆಟ್ಟ, ಭ್ರಷ್ಟ ||
ಕಾಕಾಸುರನ ನೋಡು ಏಕಾಕ್ಷಿಯಾದನು
ಪಾಕಶಾಸನನ ನೋಡು
ಆಕಾಶದಲಿ ಚಂದ್ರನಾಕಾರವನೆ ನೋಡು
ಯಾಕಲ್ಪಕಿನ್ನು ಬಿಡದು, ಕೆಡದು ||
ಸಾರದಲಿ ಸತ್ಸಂಗಿರಲು ದೂರ ದುತ್ಸಂಗ್ಹೋಗಿ
ಪೂರಯ್ಸು ಪುಣ್ಯ ಫಲದಿ
ಸೇರಿದ ಪಾಪ ಪರಿಹಾರ ಮಾಡುವ ನಮ್ಮ
ಧೀರ ಪುರಂದರವಿಠಲ ಕರುಣದಲಿ, ಪೊರೆವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments