ಬಿಲ್ಲೆಗಾರನು ಆದನು ರಂಗಯ್ಯ
( ರಾಗ ಶಂಕರಾಭರಣ. ಆದಿ ತಾಳ)
ಬಿಲ್ಲೆಗಾರನು ಆದನು ರಂಗಯ್ಯ ರಂಗ ||ಪ||
ಬಿಲ್ಲೆಗಾರನಾಗಿ ಎನ್ನ ಕಾವಲಾದ
ಬಲ್ಲವರ ಭಾಗ್ಯವೊ ಎಲ್ಲವರಿತ ಸ್ವಾಮಿ ||ಅ||
ಸಾಟಿಯಿಲ್ಲದ ಪರಿ ತಲೆಯಲಿ ಕಟ್ಟಿಹ
ನೀಟಾಗಿ ಧರಿಸಿಪ್ಪ ಅಂಗಿಗಳು
ನೋಟಕ್ಕೆ ಆಶ್ಚರ್ಯ ಕಾಲಲಿ ತೊಟ್ಟದ್ದು
ಜಾಡೆ ಮಾಡುತ ಎನ್ನ ಬೆನ್ನ್ಹಿಂದೆ ನಿಂದನು ||
ನಡುವಿಲಿ ಸುತ್ತಿಹ ಬಣ್ಣದ ಪಟ್ಟೆಯ
ಎಡದಲಿ ಪೊಳೆವುದು ಬಲ್ಲೆ ಒಂದು
ಒಡೆಯ ಎನ್ನಣ್ಣಯ್ಯ ಕರಗಳ ಕಟ್ಟಿಹ
ಬೆಡಗು ಮಾಡುತಲಿ ಬೆನ್ನಟ್ಟಿ ಬಂದನು ||
ಒಂದೊಂದು ರೂಪದಿ ಒಂದೊಂದು ಭಕುತಗೆ
ಒಂದೊಂದು ಕಾಲದಿ ತೋರುತಲಿ
ಕಂದ ಕೃಷ್ಣ ಎನ್ ತಂದೆ ಪುರಂದರವಿಠಲ
ಇಂದಿಲ್ಲಿ ಬಂದನು ಬಿಲ್ಲೆಗಾರನಾಗಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments