ಬಿನ್ನೈಪೆ ನಿನಗಾನು ಭೀಮಸೇನ
(ರಾಗ ಕಾಂಬೋಧಿ (ಭೂಪ್ ) ಝಂಪೆತಾಳ)
ಬಿನ್ನೈಪೆ ನಿನಗಾನು ಭೀಮಸೇನ ||ಪ||
ಬನ್ನಬಡುತಿಹ ಜನರ ಭಯವ ಪರಿಹರಿಸೆಂದು ||ಅ.ಪ||
ನೀಚರಿಂದಲಿ ಬಂದ ಭಯಗಳಿಂದಲಿ ಜನರು
ಯೋಚಿಸುವರೆಮಗಾರು ಗತಿಯೆನುತಲಿ
ಕೀಚಕಾಂತಕ ನಿನ್ನ ಕೀರ್ತಿ ಬಹುವಿಧ ಕೇಳಿ
ಯಾಚಿಸುವೆ ನಿನಗಾನು ಎಲ್ಲರನು ಸಲಹೆಂದು ||೧||
ರೋಚನೇಂದ್ರನೆ ಭವವಿಮೋಚಕನು ನೀನೆ
ಸಚರಾಚರಕೆ ಸಂತತ ಪುರೋಚನಾರೆ
ಪ್ರಾಚೀನ ಕರ್ಮಾಬ್ಧಿವೀಚಿಯೊಳು ಮುಳುಗಿಹರ
ಖೇಚರೇಂದ್ರಾಹಿಪ ತ್ರಿಲೋಚನರ ಗುರುವೆಂದು ||೨||
ಖಚರೋತ್ತಮನೆ ನಿನ್ನ ಸುಚರಿತ್ರೆಗಳ ಕೇಳಿ
ರಚನೆಗಯ್ಯಬಲ್ಲೆನೆ ಅಚಲಸತ್ವ
ಪ್ರಚಲಿಸುತ್ತಿಹ ಮನೋವಚನಕಾಯವ ಘಟೋ-
ತ್ಕಚಜನಕ ಸಜ್ಜನರ ಪ್ರಚಯ ಮಾಡುವುದೆಂದು ||೩||
ಈ ಚತುರ್ದಶ ಭುವನದಾಚಾರ್ಯ ದೇಶ ಕಾ-
ಲೋಚಿತ ಸುಧರ್ಮಗಳ ಸೂಚಿಸೆಮಗೆ
ಪಾಚಕನೆ ನಿನ್ನಡಿಗೆ ಚಾಚುವೆನು ಶಿರ ಸವ್ಯ-
ಸಾಚಿಸೋದರನೆ ದಯಗೋಚರಿಸಿ ಸಲಹೆಂದು ||೪||
ವಾಚಾಮಗೋಚರ ಜಗನ್ನಾಥವಿಠ್ಠಲನ
ಶ್ರೀ ಚರಣಭಜಕ ನಿಶಾಚರಾರೇ
ಮೈಚರ್ಮ ಸುಲಿದು ದುಶ್ಶಾಸನ ರಕುತ ಪರಿ-
ಷೇಚನೆಯ ಮಾಡಿದೆ ಮಹೋಚಿತವಿದೆಂದರಿತು ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments