ಬಾ ಗುಮ್ಮ ಬಂದಂಜಿಸು ಗುಮ್ಮ
(ರಾಗ ಕೇದಾರಗೌಳ. ಅಟ ತಾಳ)
ಬಾ ಗುಮ್ಮ ಬಂದಂಜಿಸು ಗುಮ್ಮ ||
ನಮ್ಮ ಸಿರಿ ರಮಣನ ಕಿರಿಚರಣದುಂಗುಟ ಕಚ್ಚು ||ಅ||
ತಿಳಿ ನೀರಲಿ ಮೈಯ ತೊಳೆದು ರಂಗಯ್ಯಗೆ
ಪುನುಗು ಜವ್ವಾಜಿ ಕಸ್ತೂರಿ ಲೇಪಿಸಿರೆ
ತೊಳೆದ ಮೈಯ ಮೇಲೆ ಧೂಳು ಚೆಲ್ಲಿಕೊಂಡು
ಹಳೆಯ ಗೋಡೆಯ ಹೊಂಪುಳಿಯ ಬಿಡಿಸುತಾನೆ ||
ತರಳೆಯ ಓಗರ ಕೆನೆಯ ಮೊಸರು ಬಟ್ಟ-
ಲೊಳಗೆ ಕಲಸಿ ಕೊಟ್ಟರುಣದೆ ಬಿಟ್ಟನು ತಾನೆ
ನೆರೆಮನೆಗ್ಹೋಗಿ ಎಂಜಲು ತಿಂದು ಬರುತಾನೆ
ಕರಿಯವರಿಗೆ ಮೆಚ್ಚಿ ಸೀರೆಯ ಕಳುತಾನೆ ||
ನೊರೆ ಹಾಲು ಸಕ್ಕರೆ ಲಡ್ಡಿಗೆ ಮಂಡಿಗೆ
ಉಣಲೊಲ್ಲದೆ ಬಟ್ಟಲೊಳು ಬಿಟ್ಟನು ತಾನೆ
ತಿರುಗ್ಹೋಗಿ ಯಜ್ಞ ಶಾಲೆಯೊಳುಂಡು ಬರುತಾನೆ
ದಿನಕೆ ನೂರು ಜಗಳವ ಕೊಂಡು ಬರುತಾನೆ||
ನಿಲ್ಲು ನಿಲ್ಲೆಂದರೆ ನಿಲ್ಲದೆ ತಾ ಮತ್ತೆ
ಗಲ್ಲದೊಳಗೆ ದೊಡ್ಡ ಕಲ್ಲನಡಚಿಕೊಂಡ
ನಿಲ್ಲು ನಿಲ್ಲೆಂದರೆ ನಿಲ್ಲದೆ ತಾ ಮತ್ತೆ
ಅಲ್ಲಲ್ಲಾಡುತ್ತಾನೆ ಹೃದಯ ಕಮಲದಲ್ಲಿ ||
ಹಾವಿನ ಬಣ್ಣದ ಗುಮ್ಮ ಈ ಮನೆಯ
ಮಾಳಿಗೆ ಚಿಂತೆಯಲಿರು ಕಂಡ್ಯ
ವಾರಿಜನಾಭ ಶ್ರೀ ಪುರಂದರವಿಠಲನ
ಯಾವಾಗಲಾದರು ಓಡಿ ಬಾ ಗುಮ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments