ಬಾರೋ ಮನೆಗೆ ಗೋವಿಂದ
(ಆರಭಿ ರಾಗ ಅಟ್ಟತಾಳ)
ಬಾರೋ ಮನೆಗೆ ಗೋವಿಂದ -ನಿನ್ನಂಘ್ರಿಕಮಲವ
ತೋರೋ ಎನಗೆ ಮುಕುಂದ ನಲಿದಾಡು ಮನದಲಿ
ಮಾರಪಿತ ಆನಂದನಂದನ್ನ ಕಂದ ||ಪ||
ಚಾರುತರ ಶರೀರ ಕರುಣಾ-
ವಾರಿನಿಧಿ ಭವ ಘೋರನಾಶನ
ವಾರಿಜಾಸನ ವಂದ್ಯ ನಿರಜ
ಸಾರ ಸದ್ಗುಣ ಹೇ ರಮಾಪತೆ ||ಅ.ಪ||
ನೋಡೋ ದಯದಿಂದೆನ್ನ, ಕರಪದುಮ ಶಿರದಲಿ
ನೀಡೋ ಭಕ್ತಪ್ರಸನ್ನ , ನಲಿದಾಡೊ ಮನದಲಿ
ಬೇಡಿಕೊಂಬೆನೊ ನಿನ್ನ , ಆನಂದ ಘನ್ನ
ಮಾಡದಿರು ಅನುಮಾನವ , ಕೊಂ-
ಡಾಡುವೆನು ತವ ಪಾದಮಹಿಮೆಗಳನು
ಜೋಡಿಸುವೆ ಕರಗಳನು ಚರಣಕೆ
ಕೂಡಿಸೊ ತವ ದಾಸಜನರೊಳು ||೧||
ಹೇಸಿ ವಿಷಯಗಳಲ್ಲಿ ತೊಳಲಾಡಿ ನಾ ಬಲು
ಕ್ಲೇಶ ಪಡುವುದು ಬಲ್ಲಿ , ಘನ ಯುವತಿಯರ ಸುಖ
ಲೇಸು ಎಂಬುದನು ಕೊಲ್ಲಿ , ಆಸೆ ಬಿಡಿಸಿಲ್ಲಿ
ಏಸು ಜನುಮದ ದೋಷದಿಂದಲಿ
ಈಸುವೆನು ಇದರೊಳಗೆ , ಇಂದಿಗೆ
ಮೋಸವಾಯಿತು ಆದುದಾಗಲಿ
ಶ್ರೀಶ ನೀ ಕೈಪಿಡಿದು ರಕ್ಷಿಸು ||೨||
ನೀನೆ ಗತಿಯೆನಗಿಂದು ಉದ್ಧರಿಸೊ ಬ್ಯಾಗನೆ
ದೀನ ಜನರಿಗೆ ಬಂಧು - ನಾ ನಿನ್ನ ಸೇವಕ
ಶ್ರೀನಿವಾಸ ಎಂದೆಂದು ಕಾರುಣ್ಯ ಸಿಂಧು
ಪ್ರಾಣಪತಿ ಹೃದಯಾಬ್ಜ ಮಂಟಪ -
ಸ್ಥಾನದೊಳಗಭಿವ್ಯಾಪ್ತ ಚಿನುಮಯ
ಧ್ಯಾನಗೋಚರನಾಗಿ ಕಣ್ಣಿಗೆ
ಕಾಣಿಸುವೆ ಶ್ರೀರಂಗವಿಠಲ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments