ಬಾರೋ ನೀನೆನ್ನ ಮನ ಮಂದಿರಕ್ಕೆ
( ರಾಗ ಮೋಹನ. ಆದಿ ತಾಳ)
ಬಾರೋ ನೀನೆನ್ನ ಮನ ಮಂದಿರಕ್ಕೆ, ತಡಮಾಡುವದೇಕೆ
ಮಾರಜನಕ ಹರಿ ನಿನ್ನಗ್ಗಳಿಕೆ, ಸ್ಮರಿಸುವೆ ಕ್ಷಣ ಕ್ಷಣಕೆ ||ಪ||
ಬಾರೊ ಬಾರೋ ಮಧುರಾಪುರಿ ಬಿಟ್ಟು, ಸೇರಿಕೊಳ್ಳದಿರೋ ವರಕರಿಪುರವ ||ಅ||
ಕುಂತೀ ಮಕ್ಕಳ ಮನೆಗ್ಹೋದೇನೆಂದೆ, ಅವರೈದು ಮಂದಿ
ಸಂತೋಷ ಪಡಿಸುವರೆಂದು ತಿಳಿದೆ, ಎಂಜಲ ಬಳಿದೆ
ಕಂತುಪಿತ ಕೇಳೊ ಮುಂದೆ ನೀ ಮುದದಿ, ಬಂಡಿಯ ಹೊಡೆದೆ
ಇಂತು ಪರಿಯ ನಾನೆಂತು ಪೇಳಲೋ
ಕಾಂತ ಎನ್ನ ಮನದಂತರ್ಯಾಮಿ ||
ಗೋಕುಲದಲ್ಲಿರೆ ನಂದಗೋಪ, ನಿನ್ನ ಕೈಯಿಂದ
ಆಕಳ ಕಾಯಿಸುವನು ಅವ ಪಾಪ, ಅದು ಅಲ್ಲದಲೆ
ನೀ ಕೇಳೋ ಗೋಪಿಯರ ಅಪಲಾಪ, ಲಾಲಿಸು ನೀ ಭೂಪ
ಈ ಕರೆಕರೆಯೊಳು ನೀ ಕೂಡಿರುವುದು
ಯಾಕೆಲೊ ಕಾಂತನೆ ಮಮ ಹೃತ್ಕಮಲಕೆ ||
ದುಷ್ಟ ಮಾವನ ಮನೆಗ್ಹೋಗಲು ಬೇಡ, ಪಟ್ಟೆದಾನೆಗಳಿಂದ
ಗಟ್ಯಾಗಿ ಮೇಲ್ತುಳಿಸುವನವ ಮೂಢ, ಮಲ್ಲರ ಕೈಯಿಂದ
ಕುಟ್ಟಿ ಕೆಡಹಿಸುವನವನು ಪ್ರಚಂಡ, ತಿಳುಹಿದೆನುದ್ದಂಡ
ಇಷ್ಟು ಪರಿಯ ಬಹು ಕಷ್ಟವೇತಕೆಲೋ
ದಿಟ್ಟ ಪುರಂದರವಿಟ್ಠಲ ಕೃಷ್ಣ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments