ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ

ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ

( ರಾಗ ಪಂತುವರಾಳಿ/ಕಾಮವರ್ಧಿನಿ. ಅಟ ತಾಳ) ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ ||ಪ|| ನಿಮ್ಮ , ಬಾಲಕೃಷ್ಣಯ್ಯಗೆ ಬುದ್ಧಿ ಹೇಳಮ್ಮ ಬಾಲಕರನು ಬಡೆವನಮ್ಮ ಮುದ್ದು, ನೀಲವರ್ಣಗೆ ಬುದ್ಧಿ ಹೇಳಮ್ಮ ||ಅ|| ಸಣ್ಣವನಾಗಿ ತೋರುವನಮ್ಮ, ಪಾಲ್- ಬೆಣ್ಣೆ ಮೊಸರು ಕದಿವನಮ್ಮ ಕಣ್ಣಾರೆ ಕಂಡವು ಮಗ ನಿಮ್ಮ , ಮುದ್ದು ಚಿಣ್ಣಗೆ ಬುದ್ಧಿಯ ಪೇಳಮ್ಮ || ಇಟ್ಟ ಕಸ್ತೂರಿ ನಾಮದವನಮ್ಮ, ಅವ ಹೊಟ್ಟೆಯೊಳಿಡಬಲ್ಲನೀ ಜಗವಮ್ಮ ದುಷ್ಟ ಹಾವನು ತುಳಿದವನಮ್ಮ, ಗೋಪಿ ಗಟ್ಟ್ಯಾಗಿ ಬುದ್ಧಿಯ ಪೇಳಮ್ಮ || ಅರಳೆಲೆ ಮಾಗಾಯಿಯವನಮ್ಮ, ಹೊನ್ನ ಬೆರಳ ರನ್ನದ ಮುದ್ರಿಕೆಯವನಮ್ಮ ಇರುಳುಹಗಲು ನಮ್ಮ ಮರುಳು ಮಾಡಿ ಪೋದ ತರಳಗೆ ಬುದ್ಧಿಯ ಪೇಳಮ್ಮ || ಮಾಯಾರೂಪಿಲಿ ಬರುವನಮ್ಮ, ಕದ್ದು ಆವಿನ ಮೊಲೆ ಉಂಬುವನಮ್ಮ ಮಾವನ ಕೊಂದನಿವನಮ್ಮ, ಚೆಲ್ವ ದೇವರ ದೇವಗೆ ಬುದ್ಧಿ ಪೇಳಮ್ಮ || ಕಡಹದ ಮರನೇರಿದವನಮ್ಮ, ಬೆಟ್ಟ ಕೊಡೆ ಮಾಡಿ ಹಿಡಿದು ಕಾಯ್ದವನಮ್ಮ ಮಡದೇರಂದದಿ ರಮಿಸುವನಮ್ಮ, ಘುಡು ಘುಡಿಸಿ ಕಂಬದಲೊಡೆವನಮ್ಮ || ಒಮ್ಮೆಗೆ ಈವರಿಗೊಲಿದವನಮ್ಮ, ಚೆಲ್ವ ಬ್ರಹ್ಮದೇವರ ಪಡೆದವನಮ್ಮ ನಮ್ಮೆಲ್ಲರ ಪೊರೆವ ಪುರಂದರ-ವಿಠಲಗೆ ಘಮ್ಮನೆ ಬುದ್ಧಿಯ ಪೇಳಮ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು