ಬರಿದೆ ನೀ ಬಯಸದಿರಿಹಲೋಕ

ಬರಿದೆ ನೀ ಬಯಸದಿರಿಹಲೋಕ

( ರಾಗ ಕಾಂಭೋಜ ಆದಿ ತಾಳ) ಬರಿದೆ ನೀ ಬಯಸದಿರಿಹಲೋಕಸುಖವೆಂಬೊ , ಅರಗಿನ ಪಾಯಸವ ಕರಣಶುದ್ಧದಿ ಗಳಿಸು ಪರಲೋಕಸುಖವೆಂಬ , ಶ್ಯಾವಿಗೆ ಪಾಯಸವ , ಹೇ ಮನವೆ ||ಅ|| ಮುಂದುವರಿಯದೆ ಬಾಳ್ವ ಮೂಢ ನೃಪನ ಸೇವೆ, ಮುಗ್ಗುರಾಗಿಯ ಹಿಟ್ಟು ಮಂದಮತಿಗಳೊಳು ಸ್ನೇಹವ ಮಾಡಲು, ನೀ ಪೋಗುವೆ ಕೆಟ್ಟು ಒಂದಿನ ಬಿಡದೆ ಸತ್ಕಥಾಶ್ರವಣವೆಂಬ, ಪಾಥೇಯವ ಕಟ್ಟು ಸಂದೇಹವಿಲ್ಲದೆ ದೊಡ್ಡ ಮಾರ್ಗದಲಿ ಮು-ಕುಂದನಂಘ್ರಿಯ ಕಟ್ಟು ಹೇ ಮನವೆ || ಅಗ್ಗದಾಸೆಗೆ ಸಂಗ್ರಹಿಸಬೇಡಘವೆಂಬ, ಅಡಿಗಂಟು ದವಸವನು ನುಗ್ಗಲೊತ್ತಿ ಕಾಮಾದಿಗಳನು ಸಂಪಾದಿಸು, ಸತ್ಕರ್ಮವೆಂಬುದನು ಯೋಗ್ಯರಡಿಗೆ ಶುದ್ಧಮನದಿಂದ ಕಾರ್ಮುಕ-ದಂದದಲಿ ಶಿರವನು ಬಗ್ಗಿ ನಡೆದು ಪರಿಹರಿಸಿ ಕಾಡುವ, ಸಂಸಾರ ಭಂಗವನು, ಹೇ ಮನವೆ || ಸಕ್ಕರೆ ಘೃತ ಪಾಲಿನಿಂದತಿಶಯ ರುಚಿಯೆಂ-ದೆಸೆವೀ ಹರಿಕಥೆಯ ಚೊಕ್ಕ ಬುದ್ಧಿಯಿಂದ ಸಂಪಾದಿಸುತಿರು, ಅಲ್ಪರ ಸಂಗತಿಯ ಸೊಕ್ಕೊಳಿತಲ್ಲ ಕೇಳೆಲೋ ಮದಡಾತ್ಮನೆ, ಸ್ವಾಮಿ ಸೇವಕ ಸ್ಥಿತಿಯ ಘಕ್ಕನರಿತು ಸೇರು ಪುರಂದರವಿಠಲನ್ನ, ಚರಣಕಮಲದ್ಯುತಿಯ, ಹೇ ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು