ಬಣ್ಣಿಸಲಳವೆ ನಿನ್ನ

ಬಣ್ಣಿಸಲಳವೆ ನಿನ್ನ

( ರಾಗ ತೋಡಿ. ಆದಿ ತಾಳ) ಬಣ್ಣಿಸಲಳವೆ ನಿನ್ನ ವೆಂಕಟರನ್ನ ||ಪ|| ಬಣ್ಣಿಸಲಳವೆ ಭಕ್ತವತ್ಸಲ ದೇವ ಪನ್ನಗ ಶಯನ ಪಾಲ್ಗಡಲೊಡೆಯನೆ ದೇವ ||ಅ|| ಅಸಮ ಸಾಹಸಿ ಸೋಮಕನೆಂಬ ದನುಜನು ಶಶಿಧರನ್ವರದಿ ಶಕ್ರಾದ್ಯರಿಗಳುಕದೆ ಬಿಸಜಸಂಭವನ ಠಕ್ಕಿಸಿ ನಿಗಮವ ಕದ್ದು ವಿಷಧಿಯೊಳಗಿರಲಾಗ ಬಂದಮರರು || ವಸುಧೀಶ ಕಾಯಬೇಕಂದೆನಲವನ ಮ- ರ್ದಿಸಿ ವೇದಾವಳಿಯ ತಂದು ಮೆರೆದ ದಶ- ದಿಸೆಯೊಳು ಬ್ರಹ್ಮಗಂದು ವೇದವ ಕರು- ಣಿಸಿದೆ ಕಂಜಾಕ್ಷ ಕೇಶವ ದಯಾಸಿಂಧು || ಇಂದ್ರಾದಿ ಸಕಲ ದೇವತೆಗಳು ದೈತ್ಯ ವೃಂದವೊಂದಾಗಿ ಮತ್ಸರವ ಮರೆದು ಕೂಡಿ ಬಂದು ನೆರೆದು ಮುರಹರ ನಿನ್ನ ಮತದಿಂದ ಮಂದರಾದ್ರಿಯ ಕಡೆಗೋಲ ಗೆಯ್ದತುಳ ಫ- ಣೀಂದ್ರನ ತನು ನೇಣಿನಂದದಿ ಬಂಧಿಸಿ ಸಿಂಧು ಮಥಿಸುತಿರಲು ಘನಾಚಲ - ವಂದು ಮುಳುಗಿ ಪೋಗಲು ಬೆನ್ನಾಂತು ಮು- ಕುಂದನೆ ಸಲಹಿದೆ ಸುರರು ಪೊಗಳಲು || ಖಳಶಿರೋಮಣಿ ಕನಕಾಕ್ಷನೆಂಬಸುರ ನಿ- ಮ್ಮೊಳುಸೆಣೆಸುವೆನೆಂದು ತವಕದಿಂದಲಿ ಬಂದು ಬಲದ ಕಡುಹಿನಿಂದಲಿ ಚೋರತನದಿಂದ ಇಳೆಯ ಕದ್ದು ರಸಾತಳದೊಳಗಿರೆ ನಿನ್ನ ಪೊಳೆವ ಕೋರೆಗಳಿಂದ ತಿವಿದು ಕೊಂದವನ- ಪ್ಪಳಿಸಿ ದಿಂಡುಗೆಡಹಿ ಬೇಗದಿ ಅವನ ಬಲವ ಕೆಡಿಸಿ ಮಡುಹಿ ಈ ಮಹೀ- ಲಲನೆಯ ಕೈಗೊಂಡೆ ಸುರರನ್ನು ಸಲಹಿ || ಹಗಲಿರುಳಳಿವಿಲ್ಲ ಕನಕಕಶಿಪು ತನ್ನ ಮಗನ ಹರಿಯ ತೋರೆಂದವನ ಬಾಧಿಸುತಿರೆ ಚಿಗಿದು ಕಂಭವನೊಡೆದಧಿಕ ರೋಷಾಗ್ನಿ ಕಾ- ರ್ಬೊಗೆ ಸೂಸಿ ಗಗನ ಮಂಡಲ ಧಗಧಗಧಗ ಧಗಿಸಿ ಪ್ರಜ್ವಾಲೆಯುಗುಳಿ ಹಿರಣ್ಯಕನ ಕೂ- ರುಗುರಿದೊಡಲ ಸೀಳಿ ರಕ್ತವಚೆಲ್ಲಿ ಬಗೆದು ಕರುಳಮಾಲೆ ಧರಿಸಲು ನರ- ಮೃಗರೂಪ ತ್ರಾಹಿಯೆಂದನು ಶಶಿಮೌಳಿ || ಕುಲಿಶಧರನ ಗೆದ್ದು ಕುವಲಯದಲಿ ಭುಜ- ಬಲ ವಿಕ್ರಮನು ಸೌಭಾಗ್ಯಗಳುನ್ನತಿಯಿಂದ ಬಲುವಾಜಿಮೇಧ ಗೆಯ್ಯಲು ವಟು ವೇಷವ ತಳೆದು ತ್ರಿಪಾದ ಭೂಮಿಯ ದಾನವ ಬೇಡಿ ಬಲಿಯ ಹಮ್ಮನು ಮುರಿಯಬೇಕೆಂದವನು ಕೊಟ್ಟ ನೆಲನ ಈರಡಿ ಮಾಡಿದೆ, ಚರಣವನೆತ್ತಿ ಜಲಜಜಾಂಡವನೊಡೆದೆ ಉಂಗುಷ್ಠದಿ ಸುಲಲಿತ ಸುಮನಸನದಿಯನ್ನು ಪಡೆದೆ || ಪೊಡವಿಪರೊಳಗಗ್ಗಳೆಯ ಕಾರ್ತವೀರ್ಯ ಕಡುಧೀರ ದೇವ ದೈತ್ಯರಿಗಂಜದವನ ಬೆಂ- ಬಿಡದೆ ಸಂಗ್ರಾಮದೊಳಧಿಕ ಸಮರ್ಥನ ಹೊಡೆದು ತೋಳ್ಗಳ ಕುಟ್ಟಿ ಕೆಡಹಿದಾಗಸದಳ ಮೃಡ ಮುಖ್ಯ ದೇವ ಸಂತತಿ ನೋಡೆ ಕ್ಷತ್ರೇಶ ಪಡೆಯ ನೆಲಕೆ ಸವರಿ, ಮಾತೆಯ ತಲೆ ಕಡಿದು ತತ್ಪತಿಗೆ ತೋರಿ, ಪಿಡಿದೆ ಗಂಡು- ಗೊಡಲಿಯ ಕರದಲಿ ಬಿರುದ ಘನ ಶೌರಿ || ದಶರಥರಾಜ ಕೌಸಲ್ಯೆರ ಮಗನಾಗಿ ಋಷಿ ವಿಶ್ವಾಮಿತ್ರನಧ್ವರವ ರಕ್ಷಿಸಿ ಘನ ವಿಷಕಂಠಧನುವ ಖಂಡಿಸಿ ಜಾನಕಿಯ ತಂದು ತ್ರಿಶಿರ ದೂಷಣ ಖಳರಳಿದು ವಾಲಿಯನೊಂದು ನಿಶಿತ ಶಸ್ತ್ರದಿ ಸಂಹರಿಸಿ ಸಾಗರವ ಬಂ- ಧಿಸಿ ಲಂಕೆಯ ದಹಿಸಿ, ರಾವಣ ರ- ಕ್ಕಸನನ್ನು ಕತ್ತರಿಸಿ, ವಿಭೀಷಣ ಗೊಸೆದು ಪಟ್ಟವ ಕಟ್ಟಿ ಮೆರೆದೆಯೊ ಸಾಹಸಿ || ದೇವಕಿ ವಸುದೇವರಲಿ ಜನಿಸಿ ಲೋಕ ಪಾವನ ಗೆಯ್ದು ಪನ್ನಗನ ಹೆಡೆಯ ಮೆಟ್ಟಿ ಗೋವಳರ ಸಲಹಿ ಗೋವರ್ಧನ ಗಿರಿಯೆತ್ತಿ ಮಾವ ಕಂಸನ ಕೊಂದು ಮಲ್ಲರ ಮರ್ದಿಸಿ ಸತ್ಯ- ಭಾಮೆಗೆ ಸುರತರುವನು ಕಿತ್ತು ತಂದಿತ್ತ ತಾವರೆ ದಳ ಸುನೇತ್ರ, ತ್ರಿಭುವನ ಪಾವನ ಚರಿತ್ರ, ಶ್ರೀ ರುಕ್ಮಿಣಿ ದೇವಿ ಮನೋಹರ ಸುಲಲಿತ ಗಾತ್ರ || ದುರುಳ ದಾನವರುಗಳಂದು ಖೇಚರದೊಳು ಹರಿಹರ ಬ್ರಹ್ಮಾದಿಗಳಿಗಳವಡದೆ ಮು- ಪ್ಪುರವ ರಚಿಸಿ ಮೂರು ಜಗಕುಪಹತಿ ಮಾಡು- ತಿರೆ ಅನುಪಮ ರೂಪದಿ ನಿಂದು ದೈತ್ಯ ಸ್ತ್ರೀ- ಯರ ಪಾತಿವ್ರತ್ಯವ ಭಂಗವ ಮಾಡಿ ಮು- ಪ್ಪುರವನಳಿದ ನಿಸ್ಸೀಮ, ಅಖಿಳ ಶ್ರುತಿ- ಯರಸಿ ಕಾಣದ ಮಹಿಮ, ಸಾಮಜರಾಜ ವರದ ಸುಪರ್ಣವಾಹನ ಸಾರ್ವಭೌಮ || ಮಣಿಮಯ ಖಚಿತ ಆಭರಣದಿಂದೆಸವ ಲ- ಕ್ಷಣವುಳ್ಳ ದಿವ್ಯ ವಾಜಿಯನೇರಿ ರಣದೊಳು ಕುಣಿವ ಮೀಸೆ ಕೋರೆ ದಾಡೆ ಭೀಕರ ಘೋರ ಬಣಗು ದೈತ್ಯರ ತಲೆ ಕಡಿದು ಎಸೆವ ಭೂತ- ಗಣಕಾಹುತಿಯಿತ್ತು ಭೂಭಾರವಿಳುಹಿದೆ ರಣಭಯಂಕರ ಪ್ರಚಂಡ, ಮೂಜಗದೊಳ- ಗೆಣೆಗಾಣೆ ನಿನಗುದ್ದಂಡ, ಕಲ್ಕಿ ದಿನ- ಮಣಿಕೋಟಿತೇಜ ದುಷ್ಕೃತಕುಲಖಂಡ || ಚಿತ್ತಜನಯ್ಯನೆ ಚಿನುಮಯರೂಪ ದೇ- ವೋತ್ತಮ ವರ ಶಂಖಚಕ್ರ ಗದಾಂಬುಜ ಉತ್ತಮಾಂಗದ ಮಣಿಮುಕುಟ ಕುಂಡಲ ಪ್ರಭೆ ವ್ಯಕ್ತ ಕೌಸ್ತುಭ ಪೀತಾಂಬರ ಕಟಿಸೂತ್ರ ಶ್ರೀ- ವತ್ಸಲಾಂಚನ ಕೇಯೂರ ಕಂಕಣಭೂಷ ನಿತ್ಯ ವೈಕುಂಠವಾಸ-ನಾಗಿಹ ಪುರು- ಷೋತ್ತಮ ಶ್ರೀನಿವಾಸ, ಪುರಂದರವಿಠಲ ತಿರುಮಲೇಶ ಪಾಹಿ ಸರ್ವೇಶ ||
ದಾಸ ಸಾಹಿತ್ಯ ಪ್ರಕಾರ
ಬರೆದವರು