ಬಂದೆಯಾ ಪರಿಣಾಮಕೆ
( ರಾಗ ಕೇದಾರಗೌಳ. ಝಂಪೆ ತಾಳ)
ಬಂದೆಯಾ ಪರಿಣಾಮಕೆ ನಿನ್ನ
ಬಂಧು ಬಳಗವನೆಲ್ಲ ಬಿಟ್ಟು ಸನ್ಮಾರ್ಗಕೆ ||ಪ||
ಸ್ಥೂಲ ಸೂಕ್ಷ್ಮ ಕಾರಣ ದೇಹಂಗಳ
ಬೀಳುಗೆಡಹಿ ಪಂಚ ಭೂತಂಗಳ
ಪಾಳುಮಾಡಿ ಪಂಚೇಂದ್ರಿಯಂಗಳ
ಕೋಳಕ್ಕೆ ತಗಲ್ಹಾಕಿ ಕೊನಬುಗಾರನಾಗಿ
ಸಂಚಿತ ಆಗಮ ಪ್ರಾರಬ್ಧಗಳನೆಲ್ಲ
ಸಂಚುಮಾಡಿ ಸಂಕೋಲ ಹಾಕಿ
ಮಿಂಚುವ ಧನ ಪುತ್ರದಾರೇಕ್ಷಣಗಳು
ವಂಚಿಪ ಕವಲುದಾರಿಯ ಬಿಟ್ಟು ಮಾರ್ಗದಿ
ಅಷ್ಟ ಮದಂಗಳ ನಷ್ಟವನ್ನೆ ಮಾಡಿ
ಅಷ್ಟೈಶ್ವರ್ಯವ ಕಟ್ಟು ಮಾಡಿ
ಅಷ್ಟ ಭೋಗಂಗಳ ಕುಟ್ಟಿ ಕೆಡಹಿ ಬಾಹ
ನಷ್ಟ ತುಷ್ಟಿಗಳೆಳ್ಳಿನಷ್ಟು ಲಕ್ಷಿಸದೆ
ಕಾಮವ ಖಂಡಿಸಿ ಕ್ರೋಧವ ದಂಡಿಸಿ
ನಾಮ ರೂಪ ಕ್ರಿಯೆಗಳ ನಿಂದಿಸಿ
ತಾಮಸ ಬುದ್ಧಿಯ ತಗ್ಗಿಸಿ ಕರ್ಮ ನಿ-
ರ್ನಾಮ ಮಾಡಿ ಮದ ಮತ್ಸರಗಳ ಸುಟ್ಟು
ಹೊಳೆವ ಪ್ರಪಂಚದ ಬಲೆಯ ಹರಿದು ನೀಚ
ಕಲಿಯ ತಂತ್ರಗಳನು ಧಿಕ್ಕರಿಸಿ
( ಪಾಠಾಂತರ : ---
ಹೊಳೆವ ಪ್ರಪಂಚದ ಬಳಗದ ಬಳ್ಳಿಯ
ಬಲೆಗಳೊಳಗೆ ಸಿಲುಕದೆ ಹರಿದು )
ಒಲಿದು ಮುಕ್ತಿಯನೀವ ಪುರಂದರವಿಠಲನ್ನ
ಒಲುಮೆಯಾದುದರಿಂದ ನಾನು ನೀನೆನ್ನದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments